ತೋಟಗಳಲ್ಲಿ ಬೆಳೆಗೆ ಕಂಟಕ ಮಳೆಗಾಲದ ನೀರು

dj khalli ayyo problem
Published on

ಕೊಂಡ್ಲಹಳ್ಳಿ: ಮಳೆಗಾಲ ಬಂತೆಂದರೆ ಪಜೀತಿ. ತೋಟಗಳಲ್ಲಿ ಬೆಳೆಗಳನ್ನಿಡುವುದೇ ಕಷ್ಟ. ಫಸಲಿಟ್ಟರೂ ಕೈಗೆಟುಕುವುದೇ ಇಲ್ಲ, ಪ್ರತಿ ಮಳೆಗಾಲದಲ್ಲೂ ತೋಟಗಳಿಗೆ ನುಗ್ಗುವ ನೀರು ಬೆಳೆಯನ್ನೇ ಇಲ್ಲದಂತಾಗಿಸುತ್ತದೆ. ಹೀಗಾಗಿ ಫಸಲಿಡುವುದನ್ನೇ ಕೈ ಬಿಟ್ಟಿದ್ದಾರೆ ಮೊಳಕಾಲ್ಮುರು ತಾಲೂಕು ಬಿ.ಜಿ. ಕೆರೆ ಗ್ರಾಮದ ರೈತರು.

ನವೆಂಬರ್​ನಲ್ಲಿ ಸುರಿದ ಚಿತ್ತಾ ಮಳೆ ಒಂದೆಡೆ ಸಮೃದ್ಧಿ ನೀಡಿದರೆ, ಮತ್ತೊಂದೆಡೆ ಬೆಳೆಗಳು ಹಾನಿಯಾಗಿ ರೈತರನ್ನು ಸಂಕಷ್ಟಕ್ಕೀಡುಮಾಡಿದೆ. ಈ ಸಮಸ್ಯೆ ಮಳೆಗಾಲದಲ್ಲಿ ನಿರಂತರವಾಗಿರುತ್ತದೆ.

ಗ್ರಾಮದ ಉರ್ದು ಶಾಲೆ ಸಮೀಪ ಕಟ್ಟೆಯಂತಿರುವ ಜಾಗದಲ್ಲಿ ಮಳೆ ಬಂದಾಗ ನೀರು ಸಂಗ್ರಹವಾಗುತ್ತದೆ. ಊರ ಹೊರವಲಯದ ಯರಬಳ್ಳಿ ಮಾರಮ್ಮನ ದೇವಸ್ಥಾನ ಭಾಗ, ಅದರಾಚೆಯಿಂದ ಹರಿದು, ಲಿಡ್ಕರ್ ಕಾಲನಿ ಮುಂಭಾಗದ ಹಳ್ಳದ ಮೂಲಕ ಹೆದ್ದಾರಿ ದಾಟಿ ಇಳಿಜಾರಿನತ್ತ ಸಾಗಿ ಹೊಸ ಆಸ್ಪತ್ರೆ ಹಿಂಬದಿಗೆ ಬಂದು ಸೇರುತ್ತದೆ.

ಅಲ್ಲಿಂದ ಮುಂದಕ್ಕೆ ಹರಿಯುವ ಮಳೆ ನೀರು ಉರ್ದು ಶಾಲೆ ಹಿಂಭಾಗದ ಗೊಂಚಿಗಾರ್ ಮಲ್ಲಿಕಾರ್ಜುನಪ್ಪ ಅವರ ತೋಟವನ್ನೆಲ್ಲ ಆವರಿಸಿಕೊಳ್ಳುತ್ತದೆ. ನಂತರ ಕೆಳ ಭಾಗದ ಹಳ್ಳದ ಕಡೆಗೆ ಹರಿಯುತ್ತದೆ.

ಮಳೆ ನೀರು ಗೊಂಚಿಗಾರ್ ಮಲ್ಲಿಕಾರ್ಜುನಪ್ಪ ಮತ್ತು ಅಕ್ಕಪಕ್ಕದ ತೋಟಗಳಿಗೆ ನುಗ್ಗಿ ಬೆಳೆಗಳನ್ನು ಮುಳುಗಿಸಿ ಇಲ್ಲವೇ ಕೊಚ್ಚಿಕೊಂಡು ಹೋಗಿ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಹೀಗಾಗಿ ಮಳೆಗಾಲವೆಂದರೆ ನಷ್ಟ ಎನ್ನುವಂತಾಗಿದೆ. ಹಲವು ವರ್ಷಗಳಿಂದ ರೈತರು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಮಳೆ ನೀರು ಮುಂದಕ್ಕೆ ಸಾಗಲು ದೊಡ್ಡ ಚರಂಡಿಯಾಗಲೀ, ಕಾಲುವೆಯಾಗಲೀ ಇಲ್ಲದಿರುವುದೇ ನೀರು ತೋಟಗಳಿಗೆ ನುಗ್ಗಲು ಕಾರಣವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ಸಾಮಾನ್ಯ. ಹಲವು ಬಾರಿ ಕೈಗೆ ಬಂದ ಬೆಳೆಗಳು ಹಾಳಾಗಿ ನಷ್ಟ ಅನುಭವಿಸುತ್ತಲೇ ಬಂದಿದ್ದೇವೆ. ಈ ವರ್ಷ ಬೆಳೆ ನಾಟಿ ಮಾಡಿಲ್ಲ. ಮಳೆ ನೀರು ಹರಿಯಲು ರಾಜ ಕಾಲುವೆ ನಿರ್ಮಾಣ ಮಾಡಿದಲ್ಲಿ ಇದಕ್ಕೆ ಪರಿಹಾರ ಸಿಗಬಹುದು. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎನ್ನುತ್ತಾರೆ ಗ್ರಾಮದ ಹಿರಿಯರಾದ ಗೊಂಚಿಗಾರ್ ಮಲ್ಲಿಕಾರ್ಜುನ್.

ಅಪಾಯದಲ್ಲಿ ವಿದ್ಯುತ್ ಕಂಬಗಳು: ಇಲ್ಲಿನ ನಿರ್ಮಾಣ ಹಂತದ ಹೊಸ ಆಸ್ಪತ್ರೆ ಪಕ್ಕದ ದಾರಿ ಈ ಬಾಗದ ಜನರಿಗೆ ಮುಖ್ಯ ರಸ್ತೆಯಾಗಿದೆ. ಜಮೀನು, ಶಾಲೆ, ರುದ್ರಭೂಮಿ, ಸಂತೆಗೆ ಸಂಪರ್ಕ ಹೊಂದಿದೆ. ಮಳೆ ನೀರಿನಿಂದ ದಾರಿ ಕೊಚ್ಚಿಕೊಂಡು ಹೋಗಿದೆ. ವಿದ್ಯುತ್ ಕಂಬಗಳು ಉರುಳಿ ಬೀಳುವ ಅಪಯದಲ್ಲಿವೆ. ಇದರಿಂದ ಏನಾದರು ಅನಾಹುತವಾಗುವ ಮುನ್ನ ರಸ್ತೆ ದುರಸ್ತಿಗೊಳಿಸಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಿದೆ.

ಹೊಸ ಆಸ್ಪತ್ರೆ ಹಿಂಬದಿ ತಗ್ಗಿನಲ್ಲಿ ಈಗಲೂ ನೀರಿದ್ದು, ಅದರೊಳಗೆ ಟಿಸಿ ಇರುವ ವಿದ್ಯುತ್ ಕಂಬಗಳು ಇವೆ. ಜಾಲಿ ಮತ್ತಿತರ ಮುಳ್ಳು ಗಿಡಗಳು ಸುತ್ತುವರಿದಿವೆ. ಈ ಭಾಗದಲ್ಲಿ ಓಡಾಡುವ ಜನರು, ವಾಹನ ಸವಾರರು ಸದಾ ಆತಂಕದಲ್ಲಿ ಇರಬೇಕಾಗಿದೆ.

ಮುಂದಾಗುವ ಅಪಾಯ ಮನಗಂಡು ಸಂಬಂಧಿಸಿದ ಬೆಸ್ಕಾಂ ಇಲಾಖೆ ಕಂಬಗಳನ್ನು ಸ್ಥಳಾಂತರಿಸಿ ಜನರ ಆತಂಕ ನಿವಾರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾತ್ಕಾಲಿಕವಾಗಿ ಚರಂಡಿ ಸ್ವಚ್ಛಗೊಳಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತ್ಯೇಕ ಅನುಮೋದನೆ ಪಡೆದು ಇಲ್ಲಿ ಸರಿಯಾದ ರೀತಿಯಲ್ಲಿ ನೀರು ಹರಿಯಲು ಅವಶ್ಯಕ ಕಾಲುವೆ ನಿರ್ವಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಸ್. ಜಯಣ್ಣ, ಗ್ರಾಪಂ ಅಧ್ಯಕ್ಷ, ಬಿ.ಜಿ. ಕೆರೆ. ಬಿ.ಜಿ.ಕೆರೆಯಲ್ಲಿ ನಿರ್ಮಾಣ ಹಂತದ ನೂತನ ಸರ್ಕಾರಿ ಆಸ್ಪತ್ರೆ ಹಿಂಭಾಗದಿಂದ ಮಳೆ ನೀರು ಹಳ್ಳಕ್ಕೆ ಸೇರುವವರೆಗೆ ನರೇಗಾ ಯೋಜನೆಯಡಿ ರಾಜ ಕಾಲುವೆ ನಿರ್ವಣಕ್ಕೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಕಾಲುವೆ ನಿರ್ವಣಕ್ಕೆ 2024-25 ಸಾಲಿಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಕಳುಹಿಸಿಕೊಡಲಾಗುವುದು. ಅನುಮೋದನೆ ದೊರೆತ ಕೂಡಲೇ ಕಾಮಗಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎನ್.ಜಿ. ಮಲ್ಲಿಕಾರ್ಜುನ್, ಬಿ.ಜಿ. ಕೆರೆ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net