ರೈತರಿಗೆ ಬೇಕಾದ ರಸಗೊಬ್ಬರ ನೀಡಿ

25 Ark 01
ಅರಕೇರಾದ ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ ಭೇಟಿ ನೀಡಿ ಸೂಚನೆ ನೀಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಹರ್ಷವರ್ಧನ ನಾಯಕ ದೊರೆ, ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ ನಾಯಕ ಜಲ್ಲೆ, ಪ್ರಮುಖರಾದ ಹನುಮಗೌಡ ಚಡಕಲಗುಡ್ಡ, ಶಾಲಂ ಬಡಿಗೇರ, ರೆಡ್ಡಿ ಎಸ್ ನಾಯಕ ಇದ್ದರು.
Published on

ಅರಕೇರಾ: ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಬಾರದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ ಹೇಳಿದರು.

ಪಟ್ಟಣದ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ತಾಲೂಕಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ನಡೆದಿದೆ. ರೈತರಿಗೆ ಅಗತ್ಯವಿರುವ ರಸಗೊಬ್ಬರ ಮಾರಾಟ ಮಾಡಬೇಕು. ರಸಗೊಬ್ಬರವನ್ನು ಗೌಪ್ಯವಾಗಿ ಸಂಗ್ರಹಿಸಿ ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ನೀಡಬೇಕು. ಒತ್ತಾಯ ಪೂರ್ವಕವಾಗಿ ವಲ್ಲದ ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಮಾಡಬಾರದು. ಸರ್ಕಾರ ನಿಗದಿಪಡಿಸಿದ ದರಪಟ್ಟಿಯನ್ನು ಮಾರಾಟ ಕೇಂದ್ರದಲ್ಲಿ ಹಾಕಬೇಕು. ಕಳಪೆ ಡಿಎಪಿ ರಸಗೊಬ್ಬರ ಕಂಡು ಬಂದರೆ ಕೂಡಲೇ ಕೃಷಿ ಇಲಾಖೆ ಗಮನಕ್ಕೆ ತರಬೇಕು.

ರೈತರ ಪ್ರಗತಿಗೆ ಎಲ್ಲರೂ ಸಹಕರಿಸಬೇಕು. ಸರ್ಕಾರದ ಸೂಚನೆಗಳನ್ನು ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ದಾಸ್ತಾನು ಸೀಜ್ ಮಾಡಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹರ್ಷವರ್ಧನ ನಾಯಕ ದೊರೆ, ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ ನಾಯಕ ಜಲ್ಲೆ, ಪ್ರಮುಖರಾದ ಹನುಮಗೌಡ ಚಡಕಲಗುಡ್ಡ, ಶಾಲಂ ಬಡಿಗೇರ, ರೆಡ್ಡಿ ಎಸ್.ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net