ಚಿಕಿತ್ಸೆಗೆ ಸ್ಪಂದಿಸದೆ ಬಾಳಂಬೀಡ ಗ್ರಾಮದ ರೈತ ಸಾವು

Ramesh Matti Farmer
Published on

ಹಾನಗಲ್ಲ: ಸಾಲ ಬಾಧೆ ತಾಳಲಾರದೇ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ. ರಮೇಶ ಚನ್ನಬಸಪ್ಪ ಮಡ್ಡಿ (47) ಆತ್ಮಹತ್ಯೆ ಮಾಡಿಕೊಂಡವ.

5 ಎಕರೆ ಜಮೀನಿನಲ್ಲಿ ಎರಡೂವರೆ ಎಕರೆ ಅಡಕೆ ತೋಟ ಮಾಡಿಕೊಂಡಿದ್ದ. 4 ಬಾರಿ ಕೊಳವೆ ಬಾವಿ ಕೊರೆಸಿದ್ದ. ಬೋರ್​ವೆಲ್ ಹಾಗೂ ಕೃಷಿಗಾಗಿ ಆಡೂರಿನ ಕೆವಿಜಿ ಬ್ಯಾಂಕಿನಲ್ಲಿ 6 ಲಕ್ಷ ರೂ., ಹಾನಗಲ್ಲಿನ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಬಂಗಾರದ ಆಭರಣಗಳನ್ನು ಅಡವಿಟ್ಟು 3 ಲಕ್ಷ ರೂ. ಸಾಲ ಪಡೆದುಕೊಂಡಿದ್ದ ಎನ್ನಲಾಗಿದೆ. ಕಳೆದ ಬೇಸಿಗೆಯಲ್ಲಿ ಕೊಳವೆ ಬಾವಿಯಲ್ಲಿ ನೀರು ಬತ್ತಿದ್ದರಿಂದ ಅಡಕೆ ಬೆಳೆ ಒಣಗಿತ್ತು. ಗೋವಿನಜೋಳ ಸೇರಿದಂತೆ ಎಲ್ಲ ಬೆಳೆಗಳೂ ಹಾನಿಯಾದ್ದರಿಂದ ಸಾಲ ತೀರಿಸಲಾಗಿರಲಿಲ್ಲ. ಇದರಿಂದ ಜಿಗುಪ್ಸೆಗೊಂಡು ಆ. 12ರಂದು ತನ್ನ ಹೊಲದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ರಮೇಶನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆ. 16ರಂದು ಮೃತಪಟ್ಟಿದ್ದಾನೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net