ರೈತರಿಗೆ ಸಾಥ್ ನೀಡದ ಮಳೆ- ಬಿತ್ತನೆ ಬೀಜ, ರಸಗೊಬ್ಬರಕ್ಕಿಲ್ಲ ಕೊರತೆ

Sindhanuru Land Ready to Sowing
ಸಿಂಧನೂರು ತಾಲೂಕಿನಲ್ಲಿ ಮುಂಗಾರು ಬಿತ್ತನೆಗೆ ರೈತರು ಹೊಲ ಸಜ್ಜುಗೊಳಿಸಿರುವುದು.
Published on

ಅಶೋಕ ಬೆನ್ನೂರು ಸಿಂಧನೂರು

ಮುಂಗಾರು ಬಿತ್ತನೆಗಾಗಿ ರೈತಾಪಿ ವರ್ಗ ಭೂಮಿ ಹದಗೊಳಿಸಿಕೊಂಡು ಸಜ್ಜಾಗಿದೆ. ಆದರೆ, ತಿಂಗಳಿಂದ ಮಳೆ ಅಭಾವ ಎದುರಾಗಿದೆ. ಮುಂಗಾರು ಬಿತ್ತನೆಗೆ ಬೇಕಾದ ಬೀಜ-ಗೊಬ್ಬರ ದಾಸ್ತಾನಿನ ಬಗ್ಗೆ ತಾಲೂಕು ಕೃಷಿ ಅಧಿಕಾರಿಗಳು ಅಭಯ ನೀಡಿದ್ದಾರೆ. ತಾಲೂಕಿನಾದ್ಯಂತ ಭೌಗೋಳಿಕ ಕ್ಷೇತ್ರದಲ್ಲಿ 160150 ಹೆಕ್ಟೇರ್ ಇದ್ದು, ಇದರಲ್ಲಿ ಖುಷ್ಕಿ 45350 ಹೆಕ್ಟೇರ್, ನೀರಾವರಿ 75769 ಹೆಕ್ಟೇರ್ ಬಿತ್ತನೆ ಪ್ರದೇಶ ಇದೆ.

ಮುಂಗಾರು ಬಿತ್ತನೆಗೆ 114222 ಹೆಕ್ಟೇರ್ ಕ್ಷೇತ್ರ ಬಿತ್ತನೆ ಗುರಿ ಇದ್ದು, ಇದರಲ್ಲಿ ನೀರಾವರಿ 92278 ಹೆಕ್ಟೇರ್ ಹಾಗೂ 21944 ಖುಷ್ಕಿ ಹೆಕ್ಟೇರ್‌ಪ್ರದೇಶದಲ್ಲಿ ಕೃಷಿ ಇಲಾಖೆ ಬಿತ್ತನೆ ಗುರಿ ಹೊಂದಿದೆ. ಆದರೆ, ಇದುವರೆಗೆ ಗುರಿಯಂತೆ ಬಿತ್ತನೆ ಸಾಧ್ಯವಾಗಿಲ್ಲ. ಜೂನ್ ಎರಡನೆಯ ವಾರ ಕಳೆದಿದ್ದರೂ ಮಳೆಯ ಸುಳಿವಿಲ್ಲ. ಕಳೆದ ತಿಂಗಳ ಬಿದ್ದ, ಬೋರ್‌ವೆಲ್ ಅವಲಂಬಿಸಿದ 347 ಹೆಕ್ಟೇರ್, 61 ಹೆಕ್ಟೇರ್ ಹತ್ತಿ ಬೆಳೆ ಇದ್ದು ಸಮರ್ಪಕವಾಗಿಲ್ಲ.

77118 ಹೆಕ್ಟೇರ್‌ನಲ್ಲಿ ಭತ್ತ, 6100 ಹೆಕ್ಟೇರ್‌ನಲ್ಲಿ ಸಜ್ಜೆ, 19783 ಹೆಕ್ಟೇರ್‌ನಲ್ಲಿ ತೊಗರಿ, 5559 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಹತ್ತಿ ಬೆಳೆ ಬೆಳೆಯುವ ಗುರಿ ಹೊಂದಲಾಗಿತ್ತು. ಸದ್ಯ ಭತ್ತ, ಸೂರ್ಯಪಾನ ಸಜ್ಜೆ, ತೊಗರಿ ಅಗತ್ಯ ಬಿತ್ತನೆ ಬೀಜ ದಾಸ್ತಾನು ಇದ್ದು, ಬೀಜದ ಕೊರತೆ ಇಲ್ಲ.

ತಾಲೂಕಿನಲ್ಲಿ 20 ಸಾವಿರ ಟನ್‌ದಷ್ಟು ಅಗತ್ಯ ಗೊಬ್ಬರ ಸಂಗ್ರಹವಿದ್ದು, 700 ಕ್ವಿಂಟಾಲ್ ವಿವಿಧ ಬೀಜಗಳ ದಾಸ್ತಾನು ಇದೆ. ಆದರೆ, ಮಳೆ ಆಗದ ಕಾರಣ ಬೀಜವನ್ನು ರೈತರು ಖರೀದಿಸಲು ಮುಂದೆ ಬಂದಿಲ್ಲ. ತಾಲೂಕಿಗೆ ಮುಂಗಾರು 39874 ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆ ಇದೆ. ಭತ್ತ ನಾಟಿಯವರೆಗೂ ಯಾವುದೇ ರೀತಿಯಲ್ಲಿ ಕೊರತೆಯಾಗುವ ಸಂಭವ ಇಲ್ಲ.

ತಾಲೂಕಿನಲ್ಲಿ ಹೆಚ್ಚಿನ ಭೂಮಿ ಭತ್ತ ನಾಟಿ ಇದ್ದು, ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹದ ಆಧಾರದ ಮೇಲೆ ಎಡದಂಡೆ ನಾಲೆಗೆ ನೀರು ಹರಿದು ಬರುವ ಲೆಕ್ಕಾಚಾರದಲ್ಲಿ ನಾಟಿ ನಡೆಯಲಿದೆ. ಶುಕ್ರವಾರದ ಲೆಕ್ಕಾಚಾರದ ಪ್ರಕಾರ ತುಂಗಭದ್ರಾ ಜಲಾಶಯದಲ್ಲಿ ಕೇವಲ 4.98 ಟಿಎಂಸಿ ನೀರು ಇದ್ದು, ಕಳೆದ ವರ್ಷ 40.45 ಟಿಎಂಸಿ ನೀರು ಈ ದಿನಕ್ಕಿತ್ತು.

ಎಲ್ಲಿಯೂ ಮಳೆ ಆಗದ ಕಾರಣ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ. ರೈತರು ಸಸಿಮಡಿ ಹಾಕಲು ಹಿಂದೇಟು ಹಾಕಿದ್ದಾರೆ. ಮುಂಗಾರು ಮಳೆ ವಿಫಲವಾಗಿರುವುದು ರೈತರನ್ನು ತೀವ್ರ ಚಿಂತಗೀಡು ಮಾಡಿದ್ದು. ಬಿತ್ತನೆಗೆ ಸಜ್ಜುಗೊಂಡು ಹೊಲಗಳು ಮಳೆಯ ಕೊರತೆ ಎದುರಿಸುತ್ತಿವೆ.

ಬಿತ್ತನೆಗೆ ಅವಶ್ಯವಿರುವ ರಸಗೊಬ್ಬರಗಳು ದಾಸ್ತಾನು ಸಮರ್ಪಕವಾಗಿವೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ಮುಂಗಾರು ಮಳೆ ಬೀಳದಿರುವುದು ಮುಂಗಾರು ಕೃಷಿ ಚಟುವಟಿಕೆಗೆ ತೀರ ಹಿನ್ನೆಡೆಯಾಗಿದೆ. ಈಗಾಗಲೇ ಟೇಲೆಂಡ್ ಸೇರಿ ಇತರ ಭಾಗದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿತ್ತು. ಭತ್ತ ನಾಟಿ ಮಾತ್ರ ಜುಲೈನಲ್ಲಿ ನಡೆಯುತ್ತದೆ. ಈ ವಾರದಲ್ಲಿ ಮಳೆ ಬೀಳುವ ಲಕ್ಷಣ ಇದೆ.| ನಜೀರ್ ಅಹ್ಮದ್, ಸಹಾಯಕ ಕೃಷಿ ಅಧಿಕಾರಿ, ಸಿಂಧನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net