

ಎಚ್.ಡಿ.ಕೋಟೆ: ಕೆರೆ ಜಾಗಕ್ಕೆ ಮಂಜೂರು ಮಾಡಿರುವ ಸಾಗುವಳಿವನ್ನು ವಜಾ ಮಾಡಬೇಕು, ಕೆರೆ ಜಾಗ ಒತ್ತುವರಿಯನ್ನು ತೆರವು ಮಾಡಬೇಕು, ಸ್ಮಶಾನಕ್ಕೆ ಹೋಗಲು ರಸ್ತೆ ಗುರುತಿಸಬೇಕು ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ರೈತ ಮುಖಂಡರು ಒತ್ತಾಯಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಬುಧವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈತ ಸಂಪರ್ಕ ಸಭೆಯಲ್ಲಿ ಕೇಳಿ ಬಂದ ಪ್ರಮುಖ ಪ್ರಶ್ನೆಗಳು. ತಾಲೂಕಿನ ಬಹುತೇಕ ಕೆರೆಗಳು ದಾಖಲೆಯಲ್ಲಿ ಮಾತ್ರ ಇದ್ದು, ಭೌತಿಕವಾಗಿ ಕಣ್ಮರೆಯಾಗಿವೆ. ಈ ಜಾಗಕ್ಕೆ ಕೆಲವರು ಸಾಗುವಳಿ ಮಂಜೂರು ಮಾಡಿಸಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ತಹಸೀಲ್ದಾರ್ ಅವರು ಪರಿಶೀಲನೆ ನಡೆಸಿ ಕೆರೆ ಜಾಗವನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಶ್ರೀನಿವಾಸ್, ಕೆರೆ ಜಾಗವನ್ನು ವ್ಯವಸಾಯ ಮಾಡುತ್ತಿರುವವರಿಗೆ ಸಾಗುವಳಿ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಅಂತಹ ಪ್ರಕರಣಗಳು ಇದ್ದಲ್ಲಿ ಕಡತ ಪರಿಶೀಲನೆ ನಡೆಸಿ ವಜಾ ಮಾಡಲಾಗುತ್ತದೆ. ಜತೆಗೆ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕೆರೆ ಜಾಗವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ರೈತ ಸಂಘದ ಟೌನ್ ಅಧ್ಯಕ್ಷ ಹೋಟೆಲ್ ಪ್ರಸಾದ್ ಮಾತನಾಡಿ, ಪಟ್ಟಣದ ಸರ್ವೇ ನಂ.14 ರಲ್ಲಿ 7.11 ಎಕರೆ ಜಾಗವನ್ನು ಅಕ್ರಮವಾಗಿ ಪುರಸಭೆಯವರು ಬೇರೆಯವರಿಗೆ ಅಕ್ರಮವಾಗಿ ಖಾತೆ ಮಾಡಿದ್ದಾರೆ. ಇದೇ ವಿಚಾರವಾಗಿ ಹಲವಾರು ಬಾರಿ ತಾಲೂಕು ಆಡಳಿತ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್, ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಮಾಡಿ ಜಿಲ್ಲಾಧಿಕಾರಿಳಿಗೆ ಕಳಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮಹದೇವ ನಾಯ್ಕ ಮಾತನಾಡಿ, ಜಮೀನು ವಿಚಾರದಲ್ಲಿ ರೈತರು ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದ ಸಂದರ್ಭದಲ್ಲಿ ಸಿವಿಲ್ ಸ್ವರೂಪದ ಪ್ರಕರಣಗಳನ್ನು ಸಂಬಂಧಿಸಿದ ತಹಸೀಲ್ದಾರ್ ಕಚೇರಿಗೆ ಪತ್ರ ಬರೆದು ನಂತರ ಕ್ರಮವಹಿಸಬೇಕು. ನೇರವಾಗಿ ಪೊಲೀಸರು ಭಾಗಿಯಾಗುವುದರಿಂದ ಅಮಾಯಕ ರೈತರಿಗೆ ಅನ್ಯಾಯ ಆಗಲಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಗಮನಕ್ಕೆ ತಂದರು.
ರೈತ ಮುಖಂಡ ಬಸವರಾಜು ಮಾತನಾಡಿ, ವಡ್ಡರಗುಡಿ ಗ್ರಾಮದಲ್ಲಿನ ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ. ಈ ಬಗ್ಗೆ ಕಳೆದ ಸಭೆಯಲ್ಲಿ ಚರ್ಚೆ ಮಾಡಿದ್ದರೂ ಕ್ರಮ ವಹಿಸಿಲ್ಲ ಎಂದರೆ ಮತ್ತೆ ಸಭೆ ಮಾಡಿದರೆ ಅರ್ಥ ಇಲ್ಲ. ಸರ್ಕಾರಿ ಸ್ಮಶಾನ ಎಂದು ಗೊತ್ತಿದ್ದರೂ ನರ್ಸರಿ ಮಾಡುವುದಕ್ಕೆ ಜಾಗ ನೀಡಿದ್ದಾರೆ. ಅಲ್ಲದೆ ಶವಸಂಸ್ಕಾರ ಮಾಡಲು ಹೆಬ್ಬಳ್ಳ ಜಲಾಶಯದ ಹಿನ್ನೀರಿನಲ್ಲಿ ರಸ್ತೆ ಇಲ್ಲ. ಹಾಗಾಗಿ ಹೇಗೆ ಅಂತ್ಯಸಂಸ್ಕಾರ ಮಾಡಬೇಕು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತಾರಕ ನೀರಾವರಿ ಇಲಾಖೆ ಇಂಜಿನಿಯರ್ ನಟಶೇಖರ್‌ಮೂರ್ತಿ, ರಸ್ತೆ ಜಾಗ ಒತ್ತುವರಿ ತೆರವುಗೊಳಿಸುವ ಸಂಬಂಧ ಆರು ವರ್ಷದ ಹಿಂದೇಯೇ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆಯಾದರೂ ಯಾವುದೇ ಕ್ರಮ ಆಗಿಲ್ಲ ಎಂದು ತಿಳಿಸಿದರು.
ಕಳೆದ ಅನುಪಾಲನ ವರದಿಯಲ್ಲಿ ಆಗಿರುವ ಕ್ರಮಗಳ ಬಗ್ಗೆ ಚರ್ಚೆಯಾಗಿಲ್ಲ. ಹೀಗಿರುವಾಗ ಹೊಸ ವಿಚಾರಗಳನ್ನು ಚರ್ಚೆ ಮಾಡಿದರೆ ಪ್ರಯೋಜನ ಇಲ್ಲ ಎಂದು ರೈತರು ಕಿಡಿಕಾರಿದರು.
ಆದೇಶ ಹಿಂಪಡೆಯುವಂತೆ ಆಗ್ರಹ: ತಾಲೂಕು ಆಡಳಿತಸೌಧ ಆವರಣದಲ್ಲಿ ಯಾವುದೇ ಪ್ರತಿಭಟನೆ ನಡೆಸುವಂತ್ತಿಲ್ಲ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿಭಟನೆ ಮಾಡಬೇಕಾದರೆ ಪಕ್ಕದಲ್ಲಿ ಮಾಡಬೇಕು ಎಂದು ನಾಮಫಲಕ ಹಾಕಲಾಗಿದೆ. ನಾವು ಇದುವರೆಗೂ ಇದೇ ಜಾಗದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಪ್ರತಿಭಟನೆ ಮಾಡಿಕೊಂಡು ಬಂದಿದ್ದು, ಮುಂದೆ ಕೂಡ ಅಲ್ಲೇ ಮಾಡುತ್ತೇವೆ ಎಂದು ರೈತರು ತಹಸೀಲ್ದಾರ್ ಅವರ ಗಮನ ಸೆಳೆದರು.
ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಮಾತನಾಡಿ, ತಾಲೂಕು ಆಡಳಿತ ಸೌಧ ಆವರಣದಲ್ಲಿ ಪ್ರತಿಭಟನೆ ಮಾಡುವುದರಿಂದ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತೊಂದರೆ ಆಗಲಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಹಾಗಾಗಿ ಇನ್ನು ಮುಂದೆ ಯಾವುದೇ ಸಂಘಟನೆಗಳು ಆಡಳಿತ ಸೌಧದ ಆವರಣದಲ್ಲಿ ಪ್ರತಿಭಟನೆ ಮಾಡುವಂತಿಲ್ಲ. ಬದಲಾಗಿ ತಾಲೂಕು ಆಡಳಿತ ಸೌಧದ ಪಕ್ಕದಲ್ಲಿ ಇರುವ ಖಾಲಿ ಜಾಗದಲ್ಲಿ ಪ್ರತಿಭಟನೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಾಗ, ರೈತ ಮುಖಂಡರು ನಾವು ಇದುವರೆಗೆ ನಾವು ಮಾಡಿಕೊಂಡ ಬಂದ ಜಾಗದಲ್ಲಿ ಪ್ರತಿಭಟನೆ ಮಾಡುತ್ತೇವೆ. ತಹಸೀಲ್ದಾರ್ ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಗ್ರೇಡ್ 2 ತಹಸೀಲ್ದಾರ್ ಶ್ರೀಧರ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ಶಿಕ್ಷಣ ಇಲಾಖೆಯ ಕೃಷ್ಣಯ್ಯ, ಉಪ ತಹಸೀಲ್ದಾರ್ ಮಹೇಶ್, ನಿಶ್ಚಿತ, ರೈತ ಮುಖಂಡರಾದ ಚೌಡಹಳ್ಳಿ ಜವರಯ್ಯ, ಜಕ್ಕಹಳ್ಳಿ ರವಿಕುಮಾರ್, ಮಾದಪುರ ಕುಮಾರ ಸ್ವಾಮಿ, ಮಟಕೆರೆ ಕೃಷ್ಣ, ಅನುಷಾ ಕೋಟೆ, ದೇವಮ್ಮ ಇದ್ದರು.
ಮಧ್ಯಾಹ್ನದ ನಂತರ ಸುಲಲಿತ: ರೈತ ಸಂಪರ್ಕ ಸಭೆ ಬೆಳಗ್ಗೆ 11.30 ಕ್ಕೆ ಪ್ರಾರಂಭವಾಗುತ್ತಿದ್ದಂತೆ, ಈ ಹಿಂದಿನ ಅನುಪಾಲನಾ ವರದಿಯನ್ನು ಸಮರ್ಪಕವಾಗಿ ತಹಸೀಲ್ದಾರ್ ಕಚೇರಿಯಿಂದ ಒದಗಿಸದ ಕಾರಣ ರೈತರು ತಾಲೂಕು ಆಡಳಿತದ ವಿರುದ್ಧ ತಿರುಗಿ ಬಿದ್ದರು. ಕಾಟಾಚಾರಕ್ಕೆ ಸಭೆ ನಡೆಸುವುದಾದರೆ ಸಭೆ ಯಾಕೆ ಕರೆಯಬೇಕು. ನಿಮಗೆ ರೈತರ ಬಗ್ಗೆ ಗೌರವ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮರ್ಪಕವಾಗಿ ಉತ್ತರ ನೀಡುವುದಾದರೆ ಸಭೆ ನಡೆಸಿ. ಇಲ್ಲ ಸಭೆ ರದ್ದು ಮಾಡಿ ಎಂದು ಒತ್ತಾಯಿಸಿ ರೈತರು ಸಭೆಯನ್ನು ಬಹಿಷ್ಕರಿಸಿ ಎಲ್ಲರೂ ಹೊರ ನಡೆದರು.
ನಂತರ ತಹಸೀಲ್ದಾರ್ ಶ್ರೀನಿವಾಸ್ ಸರಿಯಾದ ಮಾಹಿತಿ ತಾರದ ಇಲಾಖೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ರೈತ ಮುಖಂಡರನ್ನು ಮನವೊಲಿಸಿ ಮಧ್ಯಾಹ್ನ 2 ಗಂಟೆಗೆ ಅನುಪಾಲನ ವರದಿಯೊಂದಿಗೆ ಸಭೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ ನಂತರ ಮಧ್ಯಾಹ್ನ ಸುಲಲಿತವಾಗಿ ಸಭೆ ನಡೆಯಿತು.