ಸೊರ್ನಾಡ್‌ನಲ್ಲಿ ರೈತ ಮುಖಂಡರು, ಸಂತ್ರಸ್ತರ ಸಭೆ

09
Published on

ಬಂಟ್ವಾಳ: ಕುಪ್ಪೆಪದವು ನೀರಲಿಕೆ ಗ್ರಾಮದಲ್ಲಿ ರೈತ ಮಹಿಳೆ ಜೆಸಿಟಾ ಎಂಬುವರ ಭೂಮಿಯಲ್ಲಿ, ಕಾನೂನುಬಾಹಿರವಾಗಿ ಉಡುಪಿ- ಕಾಸರಗೋಡು 400 ಕೆ.ವಿ. ಟ್ರಾನ್ಸ್‌ಮಿಷನ್ ಲೈನ್ ಟವರ್ ನಿರ್ಮಿಸಲು ಯುಕೆಟಿಎಲ್ ಸ್ಟರ್ಲೈಟ್ ಕಂಪನಿ ಮುಂದಾಗಿದ್ದು, ಈ ಬಗ್ಗೆ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಸೊರ್ನಾಡ್‌ನಲ್ಲಿ ನಡೆದ ರೈತ ಮುಖಂಡರು ಹಾಗೂ ಸಂತ್ರಸ್ತರ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಕಂಪನಿಯು ರೈತರಿಗೆ ಸೂಕ್ತ ಪರಿಹಾರ ನೀಡದೆ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ಏಕಾಏಕಿ ಕೆಲಸ ಪ್ರಾರಂಭಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು.

ಕಂಪನಿಯು ಜೆಸಿಟಾ ಅವರ 6 ಸೆಂಟ್ಸ್ ಜಮೀನಿನಲ್ಲಿ ಟವರ್ ನಿರ್ಮಿಸಲು ಯೋಜನೆ ರೂಪಿಸಿದೆ. ಕೇವಲ 77 ಸಾವಿರ ರೂ. ಪರಿಹಾರ ನೀಡಿದ್ದು, ಇದು ಮಾರುಕಟ್ಟೆ ದರಕ್ಕಿಂತ ತುಂಬಾ ಕಡಿಮೆಯಾಗಿದೆ. ಜೆಸಿಟಾ ಅವರ ಆಕ್ಷೇಪಣೆಗಳನ್ನು ಆಲಿಸದೆ ಪೊಲೀಸ್ ರಕ್ಷಣೆಯೊಂದಿಗೆ ಕೆಲಸ ಪ್ರಾರಂಭಿಸಲು ಮುಂದಾಗಿದ್ದಾರೆ. ಇದು ಭಾರತೀಯ ಟೆಲಿಗ್ರಾಫ್ ಕಾಯ್ದೆ, 1885ರ ನಿಯಮಗಳ ಉಲ್ಲಂನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿನೋದ್ ಭಟ್, ರೂಪೇಶ್ ರೈ, ಇಬ್ರಾಹಿಂ, ಆಲ್ಫೋನ್ಸ್, ಚಂದ್ರಹಾಸ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

ಪೊಲೀಸ್ ದೌರ್ಜನ್ಯ ಆರೋಪ

ಕಾನೂನುಬಾಹಿರವಾಗಿ ನಡೆಯುತ್ತಿರುವ ಕೆಲಸವನ್ನು ವಿರೋಧಿಸಿ ಪ್ರತಿಭಟಿಸಿದ ರೈತರನ್ನು ಪೊಲೀಸರು ಬಲವಂತವಾಗಿ ಬಂಧಿಸಿದ್ದಾರೆ. ಕುಪ್ಪೆಪದವು ಗ್ರಾಮದಲ್ಲಿ ಜೆಸಿಟಾ ಅವರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಆ.13ರಂದು ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ರೈತ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿ, ಕಾನೂನುಬಾಹಿರವಾಗಿ ನಡೆಯುತ್ತಿರುವ ಈ ಕೆಲಸದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ತೀರ್ಮಾನಿಸಲಾಯಿತು. ಸ್ಥಳೀಯಾಡಳಿತ ಮತ್ತು ಕಂಪನಿ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಬೇಕು ಮತ್ತು ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆಗಳು ಆಗ್ರಹ ವ್ಯಕ್ತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net