ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾನಿಲಯ ಅಧಿಕೃತ: ಸರ್ಕಾರದ ನಿಲುವಿಗೆ ಹಿರಿಯ ರೈತ ಮುಖಂಡ ಕೆ.ಬೋರಯ್ಯ ಶ್ಲಾಘನೆ

K.Boraiha Mandya
Published on

ಮಂಡ್ಯ: ತಾಲೂಕಿನ ವಿ.ಸಿ ಫಾರ್ಮ್ ನಲ್ಲಿ ನೂತನ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಉಭಯ ಸದನದಲ್ಲಿ ಕೃಷಿ ವಿಜ್ಞಾನಗಳ(ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕ ಅಂಗೀಕಾರಗೊಂಡಿರುವುದರ ಬಗ್ಗೆ ರೈತ ಸಂಘದ ಹಿರಿಯ ಮುಖಂಡರೂ ಆದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ಸಂತಸದ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಜನರ ಹಲವು ದಶಕದ ಕನಸಾಗಿದ್ದ ಸಮಗ್ರ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಕ್ಕೆ ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ ಈ ನಡುವೆ ಕೃಷಿ ವಿವಿ ಮಂಡ್ಯದಲ್ಲಿ ಪ್ರಾರಂಭವಾಗದಂತೆ ಮಾಡಲು ಷಡ್ಯಂತ್ರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಕೃಷಿ ವಿವಿಯ ಅನಿವಾರ್ಯ ಎಷ್ಟಿದೆ ಮತ್ತು ಏಕೆ ಎನ್ನುವ ಕುರಿತು ಕೆ.ಬೋರಯ್ಯ ಸರ್ಕಾರ ಹಾಗೂ ಉಸ್ತುವಾರಿ ಸಚಿವರಿಗೆ ಮೂರು ಪುಟದ ಪತ್ರ ಬರೆದಿದ್ದರು.

ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿ ಕೃಷಿ ವಿಶ್ವವಿದ್ಯಾನಿಲಯ ಆಗಬೇಕೆಂಬುದು ಇತ್ತೀಚೆಗೆ ಕೇಳಿಬಂದ ಆಗ್ರಹವಲ್ಲ. ತಾಲೂಕಿನ ವಿ.ಸಿ ಾರ್ಮ್‌ನಲ್ಲಿ ಕೃಷಿ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದ ಮೂಲ ಉದ್ದೇಶವೇ ಭವಿಷ್ಯದಲ್ಲಿ ವಿವಿಯೂ ಆಗಬೇಕೆನ್ನುವುದಾಗಿತ್ತು. ಆದರೆ ಈ ಬಗ್ಗೆ ಅಷ್ಟೊಂದು ಮಾನ್ಯತೆ ಸಿಕ್ಕಿರಲಿಲ್ಲ. ಆದರೀಗ ಸಿಕ್ಕಿರುವ ಅವಕಾಶ ಕಸಿದುಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ಸದ್ದಿಲ್ಲದೆ ನಡೆಯುತ್ತಿತ್ತು. ಕಾರಣ ಮಂಡ್ಯದಲ್ಲಿ ಪ್ರಾರಂಭವಾದರೆ ಬೆಂಗಳೂರಿಗೆ ಸಿಕ್ಕಿರುವ ಅವಕಾಶ ತಪ್ಪಲಿದೆ ಎನ್ನುವುದಾಗಿತ್ತು. ಇದಕ್ಕೆ ಪೂರಕವೆನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆಯೂ ಒತ್ತಡ ಹಾಕುವ ಕೆಲಸ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪತ್ರದಲ್ಲಿ ಹಲವು ವಿಷಯ ಪ್ರಸ್ತಾಪಿಸಿದ್ದರು. ಇದೀಗ ವಿಧೇಯಕ ಅಂಗೀಕಾರವಾಗಿ ವಿವಿ ಸ್ಥಾಪನೆ ಅಧಿಕೃತಗೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಹಾಗೂ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net