ಅಗತ್ಯವಸ್ತು ಬೆಲೆ ನಿಯಂತ್ರಣಕ್ಕೆ ಆಗ್ರಹ: ಮಂಡ್ಯದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

farmer labor and laborer organizations Protest mandya
Published on

ಮಂಡ್ಯ: ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ರೈತ, ಕಾರ್ಮಿಕ, ಕೂಲಿಕಾರರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಸಂಯುಕ್ತ ಹೋರಾಟ ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ಸಿಲ್ವರ್ ಜೂಬಿಲಿ ಪಾರ್ಕ್‌ನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ದೇಶದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಹತ್ತು ವರ್ಷಗಳಾಗಿವೆ. ಎರಡು ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಹಣ, ಡಾ.ಸ್ವಾಮಿನಾಥನ್ ಶಿಫಾರಸಿನಂತೆ ಬೆಂಬಲ ಬೆಲೆಗೆ ಕಾನೂನು ರೂಪಿಸಲಾಗುವುದೆಂದು ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಆದರೆ ಆಹಾರ, ಆರೋಗ್ಯ, ಶಿಕ್ಷಣದ ಅನುದಾನ ಕಡಿತ ಮಾಡಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಬೇಕು. ಸಾರ್ವಜನಿಕ ಕ್ಷೇತ್ರದ ಕೈಗಾರಿಕೆ ಹಾಗೂ ಸೇವೆಯನ್ನು ಬಲಪಡಿಸಬೇಕು. ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನೀಡುವ ಕಾನೂನು ರೂಪಿಸಬೇಕು. ಕೃಷಿ ಕಾರ್ಮಿಕರ ಸಮಗ್ರ ಕಲ್ಯಾಣಕ್ಕೆ ಯೋಜನೆ ಜಾರಿಗೊಳಿಸಬೇಕು. ನರೇಗಾ ಕೆಲಸದ ದಿನವನ್ನು 200 ದಿನಕ್ಕೆ ಹೆಚ್ಚಿಸಿ ಪ್ರತಿ ದಿನಕ್ಕೆ 600 ರೂ ಕೂಲಿ ನಿಗದಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಸಿಐಟಿಯು ಸಿ.ಕುಮಾರಿ, ಚಂದ್ರಶೇಖರ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಎಂ.ಪುಟ್ಟಮಾದು, ಅಮಾಸಯ್ಯ, ಆರ್.ರಾಜು, ರೈತ ಸಂಘದ ಲಿಂಗಪ್ಪಾಜಿ, ಶಿವಳ್ಳಿ ಚಂದ್ರಶೇಖರ್, ಅಂಚೆ ನೌಕರರ ಸಂಘದ ಪ್ರಮೀಳಾ ಕುಮಾರಿ, ಅಂಗನವಾಡಿ ನೌಕರರ ಸಂಘದ ವಿಜಯಲಕ್ಷ್ಮೀ, ಮಂಗಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net