ಹೆಜ್ಜೇನು ದಾಳಿಗೆ ಕೃಷಿ ಕೆಲಸ ಮಾಡುತ್ತಿದ್ದ ರೈತ ಬಲಿ

16 mlv 6 ನಿಂಗೇಗೌಡ (48)
ನಿಂಗೇಗೌಡ
Published on

ಮಳವಳ್ಳಿ: ತಾಲೂಕಿನ ಕಂದೇಗಾಲ ಗ್ರಾಮದ ಸಮೀಪದ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದವರ ಮೇಲೆ ಸೋಮವಾರ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ರೈತನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಂದೇಗಾಲ ಗ್ರಾಮದ ಲೇ. ಬಸವೇಗೌಡ ಎಂಬುವರ ಪುತ್ರ ನಿಂಗೇಗೌಡ (48) ಜೇನು ದಾಳಿಗೆ ಬಲಿಯಾದ ರೈತ. ಇವರು ತಮ್ಮ ಜಮೀನಿನಲ್ಲಿ ಇತರ ರೈತರ ಜತೆಗೂಡಿ ರೇಷ್ಮೆ ಸೊಪ್ಪು ಕೊಯ್ಯುತ್ತಿದ್ದರು. ಈ ವೇಳೆ ಸಮೀಪವಿದ್ದ ಮರದಲ್ಲಿ ಕಟ್ಟಿದ್ದ ಜೇನುಗೂಡಿಗೆ ಪಕ್ಷಿಯೊಂದು ಬಡಿದು ಹೋಗಿದೆ. ಇದರಿಂದ ಒಮ್ಮೆಲೆ ಚದುರಿದ ಜೇನು ಹುಳುಗಳು ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ದಾಳಿ ನಡೆಸಿವೆ. ಇವರಲ್ಲಿ ಕೆಲವರು ಓಡಿಹೋಗಿ ಪಕ್ಕದಲ್ಲಿದ್ದ ಕಬ್ಬಿನ ಗದ್ದೆಗಳಲ್ಲಿ ಅಡಗಿ ಕುಳಿತು ಪಾರಾದರು. ಆದರೆ ನಿಂಗೇಗೌಡರ ಮುಖದ ತುಂಬೆಲ್ಲ ಕುಳಿತ ಜೇನು ಹುಳುಗಳು ಆವರಿಸಿಕೊಂಡಿದ್ದವು. ಇವುಗಳ ರಕ್ಷಣೆಗಾಗಿ ಪಕ್ಕದಲ್ಲಿದ್ದ ಹುಲ್ಲಿನ ಪೊದೆಯಲ್ಲೆಲ್ಲ ಅಡ್ಡಾಡಿ ವಿಫಲರಾಗಿ ನೋವು ತಾಳಲಾರದೆ ಕುಸಿದು ಬಿದ್ದಿದ್ದಾರೆ. ಸ್ವಲ್ಪ ಸಮಯದ ನಂತರ ಹತ್ತಾರು ರೈತರು ಸೇರಿಕೊಂಡು ಬೆಂಕಿಹೊಗೆಯ ರಕ್ಷಣೆಯಲ್ಲಿ ಬಂದು ನೋಡುವಷ್ಟರಲ್ಲಿ ನಿಂಗೇಗೌಡ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದು, ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು. ನಂತರ ಶವಾಗಾರಕ್ಕೆ ಮೃತದೇಹವನ್ನು ಸ್ಥಳಾಂತರಿಸಲಾಯಿತು.

ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹವನ್ನು ಒಪ್ಪಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net