ಕಾಡಾನೆ ದಾಳಿಗೆ ರೈತ ಬಲಿ

25 lingada halli 1
Published on

ಲಿಂಗದಹಳ್ಳಿ(ತರೀಕೆರೆ): ತರೀಕೆರೆ ತಾಲೂಕು ತಣಿಗೆಬೈಲಿಗೆ ನುಗ್ಗಿದ ಕಾಡಾನೆಯನ್ನು ಭದ್ರಾ ಅಭಯಾರಣ್ಯಕ್ಕೆ ಸೋಮವಾರ ಹಿಮ್ಮೆಟ್ಟಿಸುವ ವೇಳೆ ಆನೆ ದಾಳಿಗೆ ಸಿಲುಕಿ ರೈತ ಮೃತಪಟ್ಟಿದ್ದಾರೆ.

ವರ್ತೆಗುಂಡಿ ಗ್ರಾಮದ ಅಕ್ಬರ್(38) ಮೃತ ದುರ್ದೈವಿ. ಸೋಮವಾರ ಬೆಳಗ್ಗೆ 11 ಗಂಟೆ ವೇಳೆಗೆ ತಣಿಗೆಬೈಲಿನ ಬಳಿ ಕಾಡಾನೆ ಕಂಡುಬಂದಿದ್ದು, ಬೆಳೆಗಳನ್ನು ರಕ್ಷಿಸುವ ಸಲುವಾಗಿ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಕಾಡಾನೆಯನ್ನು ಭದ್ರಾ ಅಭಯಾರಣ್ಯಕ್ಕೆ ಹಿಮ್ಮೆಟ್ಟಿಸಲು ಮುಂದಾಗಿದ್ದರು. ಈ ವೇಳೆ ಗಾಬರಿಗೊಂಡ ಕಾಡಾನೆ ಜನರತ್ತ ತಿರುಗಿದ್ದು, ಆನೆ ತುಳಿತಕ್ಕೆ ಸಿಲುಕಿ ರೈತ ಅಕ್ಬರ್ ಮೃತ ಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ಭರವಸೆ ನೀಡಿದರು. ಡಿವೈಎಸ್‌ಪಿ ಹಾಲಮೂರ್ತಿ ರಾವ್, ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್, ಎಸ್‌ಐ ಶಶಿಕುಮಾರ್, ಡಿಎಫ್‌ಒ ಯಶಪಾಲ್, ಎಸಿಎಫ್ ವೀರೇಶ್ ಗೌಡ, ಆರ್‌ಎಫ್‌ಒ ಸಂಗೀತಾ, ಗ್ರಾಪಂ ಸದಸ್ಯ ತಣಿಗೆಬೈಲು ರಮೇಶ್, ಬಗರ್‌ಹುಕುಂ ಸಮಿತಿ ಸದಸ್ಯ ಮಹಮ್ಮದ್ ಅಕ್ಬರ್ ಮುಂತಾದವರು ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ರೈತರ ಆಕ್ರೋಶ: ಬರದ ಕಾರಣ ಕಾಡಿನಲ್ಲಿ ನೀರು, ಆಹಾರ ದೊರೆಯದೆ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ವನ್ಯ ಪ್ರಾಣಿಗಳು ಸುತ್ತಮುತ್ತಲಿನ ಗ್ರಾಮಗಳ ಮೇಲೆ ದಾಳಿಯಿಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಬಾಳೆ, ಅಡಕೆ, ತೆಂಗು, ಕಾಳುಮೆಣಸು, ಕಾಫಿ ಮುಂತಾದ ಬೆಳೆಗಳನ್ನು ತಿಂದು ಹಾಳುಗೆಡುವುತ್ತಿದ್ದು ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಜತೆಗೆ ಪಂಪ್‌ಸೆಟ್, ಪೈಪ್‌ಲೈನ್ ಹಾಳಾಗುತ್ತಿವೆ. ತೋಟಕ್ಕೆ ತೆರಳಲು ಜೀವಭಯ ಕಾಡುತ್ತಿದ್ದು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಸ್ಥರು ತಣಿಗೆಬೈಲಿನಲ್ಲಿರುವ ಭದ್ರಾ ಅಭಯಾರಣ್ಯ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಇಷ್ಟರೊಳಗೆ ಸೋಮವಾರ ಕಾಡಾನೆ ದಾಳಿಯಿಂದ ಗ್ರಾಮಸ್ಥ ಮೃತಪಟ್ಟಿದ್ದು, ಸ್ಥಳೀಯರ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net