

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬೆಳತ್ತೂರು ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಪ್ರಗತಿಪರ ರೈತ ಮೃತಪಟ್ಟಿದ್ದಾನೆ. ರಾಜೇನಹಳ್ಳಿ ಗ್ರಾಮದ ರವಿಕುಮಾರ್(43) ಮೃತ ದುರ್ದೈವಿ. ಕಟ್ಟೆಕ್ಯಾತನಹಳ್ಳಿ-ಬೆಳತ್ತೂರು ಮದ್ಯೆ ಇರುವ ಜಮೀನಿನ ಬಳಿ ತೆರಳಿದ್ದಾಗ ದುರಂತ ಸಂಭವಿಸಿದೆ.
ರಾಜೇನಹಳ್ಳಿ ಗ್ರಾಮದಿಂದ ಗುರುವಾರ ಮಧ್ಯಾಹ್ನ ಜಮೀನಿಗೆ ಹುಲ್ಲು ಕುಯ್ಯಲು ತೆರಳಿದ್ದ ರವಿಕುಮಾರ್, ವಿದ್ಯುತ್ ಪರಿವರ್ತಕದ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನ ಹರಿಸದೆ ಜಮೀನಿನ ಬದುವಿನ ಮೇಲೆ ನಡೆದುಹೋಗುತ್ತಿದ್ದಾಗ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಆದರೆ ದುರಂತವನ್ನು ಯಾರು ಗಮನಿಸಿಲ್ಲ. ಇತ್ತ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು ಹುಡುಕಿಕೊಂಡು ಹೋದಾಗ ದುರಂತ ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನು ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಂತಿ ತುಂಡಾಗಿ ಬಿದ್ದಿದ್ದರೂ ದುರಸ್ತಿ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿದರು.