

ಚಿಕ್ಕಬಳ್ಳಾಪುರ: ಯಮ ಸ್ವರೂಪಿಯಂತೆ ಬಂದ ಜಿಮ್ನಿ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಎತ್ತಿನಗಾಡಿಯಲ್ಲಿದ್ದ ರೈತ ಹಾಗೂ ಜೋಡೆತ್ತುಗಳು ಸ್ಥಳದಲ್ಲೇ ಮೃತಪಟ್ಟ ಘಟನೆಯು ಚೇಳೂರು ತಾಲೂಕಿನ ಆಚಗಾನಹಳ್ಳಿಯಲ್ಲಿ ಸಂಭವಿಸಿದೆ.
ಬೂಡಿದಗಡ್ಡಪಲ್ಲಿಯ ರೈತ ರಾಮಚಂದ್ರಪ್ಪ( 55 ವರ್ಷ) ಮೃತ. ಎತ್ತಿನಗಾಡಿ ಸಹ ಸಂಪೂರ್ಣ ಛಿದ್ರವಾಗಿದೆ.
ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯ ರಸ್ತೆ ಮಾರ್ಗವಾಗಿ ಅಚಗಾನಪಲ್ಲಿ ಕಡೆಯಿಂದ ವೇಗವಾಗಿ ಬಂದ ಜಿಮ್ನಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ತಿಮ್ಮಸಂದ್ರ ಮಾರ್ಗವಾಗಿ ಆಚಗಾನಹಳ್ಳಿ ಕಡೆ ಬರುತ್ತಿದ್ದ ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಎತ್ತಿನಗಾಡಿ ಹಳ್ಳಕ್ಕೆ ಬಿದ್ದಿದ್ದು ಮೂಕಜೀವಿಗಳ ಸಮೇತ ರೈತ ಮೃತಪಟ್ಟಿದ್ದಾನೆ. ಮತ್ತೋರ್ವ ರೈತ ಕಾರ್ಮಿಕ ಗಂಗರಾಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತನ ಜತೆಗೆ ಜಿಮ್ನಿ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಕಂಠಪೂರ್ತಿ ಮದ್ಯ ಸೇವಿಸಿ ವಾಹನ ಚಲಾಯಿಸಿರುವುದರಿಂದಲೇ ರಸ್ತೆ ಅಪಘಾತ ಸಂಭವಿಸಿದೆ ಎಂದು ಆಚಗಾನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಚೇಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.