

ಜಮಖಂಡಿ: ಕಟ್ಟಿದ ಮನೆ ಸಿಂಗಾರವಾಗಿ ಕಾಣಬೇಕಾದರೆ ಮನೆಯಲ್ಲಿ ದನ, ಮಕ್ಕಳು-ಮರಿ ಇರಬೇಕು. ಎತ್ತು-ಆಕಳು ಇರುವ ಮನೆ ಧರ್ಮದ ಮನೆಯಾಗಿರುತ್ತದೆ. ಒಕ್ಕಲುತನದ ಮನೆಯಲ್ಲಿ ಪರಮಾತ್ಮ ನೆಲೆಸಿರುತ್ತಾನೆ. ರೈತನೇ ಎರಡನೇ ಪರಮಾತ್ಮ ಎಂದು ಬೀಳಗಿಯ ಜಾನಪದ ಕಲಾವಿದ ಸಿದ್ದಪ್ಪ ಬಿದರಿ ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಶ್ರೀ ಗುರುದೇವಾಶ್ರಮದಲ್ಲಿ ಶ್ರೀ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳು ನಾಲ್ಕನೇ ಭಾನುವಾರ ಆಯೋಜಿಸುವ ಶ್ರೀ ಗುರುದೇವ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ತಮ್ಮ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವುದಿಲ್ಲ. ರೈತರ ಮಕ್ಕಳಿಗೆ ಹೆಣ್ಣು ಕೊಡಬೇಕು. 10-12 ಜಾನುವಾರು ಸಾಕುವ, ನೂರಾರು ಜನರನ್ನು ಸಲುಹುವ ರೈತನಿಗೆ ತನ್ನ ಹೆಂಡತಿಯನ್ನು ಸಲುಹುದಾಗದೆ ಎಂದು ಖಾರವಾಗಿ ಪ್ರಶ್ನಿಸಿದ ಅವರು ಒಕ್ಕಲುತನಕ್ಕೆ ಒತ್ತು ಕೊಟ್ಟು ದುಡಿಯುವವರ ಮನೆ ಬಂಗಾರವಾಗುತ್ತೆ ಎಂದರು.
ಶ್ರೀ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸತ್ಯವನ್ನು ತಿಳಿಯಲು, ನನ್ನನ್ನು ನಾನು ಅರಿಯಲು, ದೇಹ ಯಾರು? ನಾನು ಯಾರು? ಎಂದು ಅರಿತುಕೊಳ್ಳಲು ಸತ್ಸಂಗ ಬೇಕು. ಜಗತ್ತು, ಜೀವ, ಪರಮಾತ್ಮ, ಜಗತ್ತಿನಲ್ಲಿರುವ ಬಂಧನ, ಮಾಯೆ ಕುರಿತು ಚಿಂತನೆ ಮಾಡಲು ಸತ್ಸಂಗ ಅಗತ್ಯ ಎಂದು ಆಶೀರ್ವಚನ ನೀಡಿದರು.
ಆತ್ಮ, ಜೀವ ಬಹಳ ಸೂಕ್ಷ್ಮವಾಗಿದೆ. ಆತ್ಮನನ್ನು ಮನಸ್ಸು ಆವರಿಸಿರುತ್ತದೆ. ಮನಸ್ಸಿಗೆ ಅದ್ಭುತ ಶಕ್ತಿ ಇದೆ. ಆದರೆ, ಮಾತು ಮನಸ್ಸನ್ನು ನಿಯಂತ್ರಿಸುತ್ತದೆ. ಮಾತಿನಂತೆ ಮನಸ್ಸು ಬದಲಾಗುತ್ತದೆ. ಹಾಗಾಗಿ ಮಾತು ಶುದ್ಧವಾದರೆ ದೇಹ ಶುದ್ಧವಾಗುತ್ತದೆ. ಸತ್ಸಂಗದಿಂದ ಮಾತುಗಳು ಶುದ್ಧಿಯಾಗುತ್ತವೆ ಎಂದು ತಿಳಿಸಿದರು.
ಮಹಾಪ್ರಸಾದದ ಸೇವೆ ಮಾಡಿದ ವಿಜಯಕುಮಾರ ಹಿರೇಸೋಮಣ್ಣವರ ದಂಪತಿ, ಜಯಕುಮಾರ ಹಿರೇಸೋಮಣ್ಣವರ ದಂಪತಿ, ಪಿಎಸ್‌ಐ ಹುದ್ದೆಗೆ 56ನೇ ರ‌್ಯಾಂಕ್‌ನೊಂದಿಗೆ ಆಯ್ಕೆಯಾಗಿರುವ ಶಿವರಾಜ ಗುರುಬಸುಗೌಡ ಪಾಟೀಲ, ತುಂಗಳ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಶೋಕ ತುಂಗಳ, ಡಾ.ಲಕ್ಷ್ಮೀ ತುಂಗಳ ದಂಪತಿ, ವಿಶೇಷ ಸಾಧಕ ಸಂಗಮೇಶ ಮಲಕಪ್ಪನವರ ಅವರನ್ನು ಶ್ರೀಮಠದ ಪರ ಸನ್ಮಾನಿಸಲಾಯಿತು.
ಶ್ರೀಮಠದ ಸಾಧಕ ಶಾಸೀ ಇದ್ದರು. ಶ್ರೀ ಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ರಮೇಶ ಬಾಡನವರ, ಪುಂಡಲೀಕ ಭಜಂತ್ರಿ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.