

ಚಿತ್ರದುರ್ಗ: ಅನ್ನದಾತ ವಿಶ್ವದಲ್ಲೇ ಅತಿ ದೊಡ್ಡ ಶ್ರೀಮಂತನೆಂದು ಸಾಕ್ಷಿಕರಿಸುವ, ರೈತಸಮುದಾಯದ ಬದುಕು-ಬವಣೆ ಅನಾವರಣಗೊಳಿಸುವುದೇ ಶ್ರೀಮಂತ ಸಿನಿಮಾದ ಉದ್ದೇಶ. ಇದರಲ್ಲಿ ಉತ್ತಮ ಸಂದೇಶಗಳಿವೆ ಎಂದು ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಸನ ರಮೇಶ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗಗಳ ಸುಗ್ಗಿ, ಸೊಗಡು, ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಗತಕಾಲದ ಸಂಭ್ರಮ ನೆನಪಿಸುವ, ಕರ್ನಾಟಕದ ಜನಪದ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿಬಿಂಬಿಸಿ ಪ್ರೇಕ್ಷಕರನ್ನು ಜಾಗೃತಗೊಳಿಸುವುದರ ಜತೆಗೆ ಮನರಂಜಿಸುವ ಚಿತ್ರ ಇದಾಗಿದೆ ಎಂದರು.
ರಾಜ್ಯಾದ್ಯಂತ ಏ.14ರಂದು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ. ಹೀಗಾಗಿ ಜಿಲ್ಲಾವಾರು ಪ್ರವಾಸ ಕೈಗೊಂಡು ಪ್ರಚಾರ ಮಾಡಲಾಗುತ್ತಿದೆ. ಇದು ಪೂರ್ಣ ಪ್ರಮಾಣದಲ್ಲಿ ರೈತನಿಗೆ ಸಂಬಂಧಿಸಿದ್ದು, ಆತ ಎಲ್ಲ ಹಂತದಲ್ಲೂ ಸಿರಿವಂತನಾಗಿದ್ದಾನೆ. ರೈತ ಸಮುದಾಯ ಸೇರಿ ಪ್ರತಿಯೊಬ್ಬರೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ಇದಾಗಿದ್ದು, ಸೋನು ಸೂದ್ ಅವರು ಪ್ರಥಮ ಬಾರಿ ನಾಯಕ ನಟರಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.
ಇದೇ ಪ್ರಥಮ ಬಾರಿ ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿ ಚಿತ್ರ ನಿರ್ಮಿಸಲಾಗಿದೆ. ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದನ್ ಚಿತ್ರದಲ್ಲಿ ಇಬ್ಬರೂ ನಾಯಕಿಯರಿದ್ದು, ಕ್ರಾಂತಿ ಎಂಬ ಹೊಸ ಯುವ ಪ್ರತಿಭೆ ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ರಾಂತಿ, ಬ್ಯಾಂಕ್ ಮಂಜಣ್ಣ, ಸತೀಶ್, ಸಂಜಯ್‌ಬಾಬು ಪಟೇಲ್ ಇತರರಿದ್ದರು.