

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದ ಜಮೀನೊಂದರಲ್ಲಿ ಸೋಮವಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರೊಬ್ಬರ ಮೇಲೆ ಕರಡಿ ದಾಳಿ ನಡೆಸಿ, ಗಾಯಗೊಳಿಸಿದೆ.
ಗ್ರಾಮದ ವೀರಪ್ಪ (60) ಗಾಯಗೊಂಡ ರೈತ. ಇವರು ಗ್ರಾಮದ ಹೊರ ವಲಯದಲ್ಲಿ ಜಮೀನನ್ನು ಹೊಂದಿದ್ದು, ಬೆಳಗ್ಗೆ ಸುಮಾರು 7ರ ವೇಳೆಯಲ್ಲಿ ಜಮೀನಿಗೆ ತೆರಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ವೇಳೆ ಹಿಂಬದಿಯಿಂದ ಏಕಾಏಕಿ ಬಂದ ಕರಡಿ ವೀರಪ್ಪ ಅವರ ಮೇಲೆ ದಾಳಿ ನಡೆಸಿದೆ. ಪರಿಣಾಮ ತೊಡೆಯ ಭಾಗಕ್ಕೆ ಗಾಯವಾಗಿದೆ. ಅಕ್ಕಪಕ್ಕದ ರೈತರು, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿದಿ ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬಸ್ಥರು ಗಾಯಾಳುವಿಗೆ ಚಿಕಿತ್ಸೆ ಹಾಗೂ ಪರಿಹಾರ ದೊರಕಿಸಿ ಕೊಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.