

ದೇವದುರ್ಗ: ಕೋಳೂರು ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದಸರಾ ನಿಮಿತ್ತ ಭಾನುವಾರ ದೈವವಾಣಿ ಕಾರ್ಯಕ್ರಮ ನಡೆಯಿತು. ಇಲ್ಲಿನ ದೈವವಾಣಿಗೆ 400 ವರ್ಷಗಳ ಇತಿಹಾಸವಿದೆ.
ದೇವಸ್ಥಾನದ ಪೀಠಾಧೀಶ ಶ್ರೀ ನಿಜಲಿಂಗ ಸ್ವಾಮೀಜಿ ಕಾಲಜ್ಞಾನ ಹೇಳಿಕೆ ನೀಡಿದರು. ಇವರ ದೈವವಾಣಿ ಬಗ್ಗೆ ಈ ಭಾಗದ ರೈತಾಪಿ ವರ್ಗಕ್ಕೆ ಅಪಾರ ನಂಬಿಕೆ ಇದೆ. ಮೈಲಾರಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆ 6ಗಂಟೆಗೆ ಮೈಲಾರಲಿಂಗೇಶ್ವರ ಮೂರ್ತಿಯೊಂದಿಗೆ ಕೃಷ್ಣಾ ನದಿಗೆ ತೆರಳಿ ಗಂಗಾಪೂಜೆ ನೆರವೇರಿಸಲಾಯಿತು.
ಮೊದಲು ಮದರಕಲ್ ಗ್ರಾಮದಲ್ಲಿ ದೈವವಾಣಿ ಹೇಳಿದರು. ನಾಲ್ಕು ಮೂಲೆ ಎಂಟು ದಿಕ್ಕು ಮುಂಗಾರು ಮಿಂಚಿತು. ಹಿಂಗಾರಿ ನಡಗಡ್ಡಿಗೆ ಬುತ್ತಿ ಇಟ್ಟಿನಿ. ಜಾಕಿ ಬಲಜಾಕಿ ಎಂದು ಹೇಳಿದರು. ನಂತರ ಹೇಮನಾಳ ಗ್ರಾಮಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ರಾತ್ರಿ ಕೋಳೂರಿಗೆ ಹಿಂದಿರುಗಿದ ಬಳಿಕ ಬೆಳ್ಳಿ ಬೆತ್ತ ಎತ್ತಾಡೀನಿ ಒಕ್ಕಲ ಮಗನ ಕೈ ಹಿಡಿದೀನಿ ಇಡು ಏಳುಕೋಟಿಗೆ ಎಂದು ಭವಿಷ್ಯವಾಣಿ ನುಡಿದರು. ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಹಿಂಗಾರು ಕೂಡ ರೈತರ ಕೈಹಿಡಿಯಲಿದೆ ಎಂದು ದೈವವಾಣಿಯನ್ನು ವಿಶ್ಲೇಷಿಸಲಾಗಿದೆ. ಬೆಳ್ಳಿ ಬೆತ್ತ ಎತ್ತಾಡಿನಿ ಎಂದರೆ, ಬೆಳ್ಳನೆ ಬೆಳೆಗಳು ಹಾಗೂ ತೂಕದ ಬೆಳೆಗಳಿಗೆ ಬೆಲೆ ಸಿಗಲಿದೆ ಎಂದು ಅರ್ಥೈಸಲಾಗಿದೆ.