ಹುಸಿಯಾದ ಕೃಷಿಕರ ಕನಸು, ಬಿತ್ತನೆ ಖರ್ಚು ಬಾರದೆ ನಷ್ಟ

04ALD07
ಕೊತ್ತಂಬರಿ ಕೀಳುತ್ತಿರುವ ಕೃಷಿ ಕಾರ್ಮಿಕರು.
Published on

ಅಳವಂಡಿ: ಕೆಲ ವರ್ಷಗಳ ಹಿಂದೆ ಮುಂಗಾರು ಹಂಗಾಮಿನಲ್ಲಿ ಭರ್ಜರಿ ಮಳೆಯಾದ್ದರಿಂದ ಖುಷಿಗೊಂಡ ರೈತರು, ಅಲ್ಪಾವಧಿ ಬೆಳೆಯಾದ ಕೊತ್ತಂಬರಿ ಬೆಳೆದು ಭರ್ಜರಿ ಲಾಭ ಗಳಿಸಿದ್ದರು.

ಪ್ರಸಕ್ತ ವರ್ಷ ಅಲ್ಪಮಳೆಯಾದ್ದರಿಂದ ಕೊತ್ತಂಬರಿ ಬೆಳೆವಣಿಗೆ ಕುಂಠಿತಗೊಂಡಿದೆ. ಈ ಭಾಗದ ಕೊತ್ತಂಬರಿ ಬಹುತೇಕ ಮಹಾರಾಷ್ಟ್ರಕ್ಕೆ ರವಾನೆಯಾಗುತ್ತದೆ.

ಅಲ್ಲಿ ಮುಂಗಾರು ಮಳೆ ಅಧಿಕವಾದರೆ ಕೊತ್ತಂಬರಿ ಬೆಳೆ ಪ್ರಮಾಣ ಕಡಿಮೆಯಾಗುವುದರಿಂದ ಅಳವಂಡಿ ಹೋಬಳಿಯ ಫಸಲಿಗೆ ಅಧಿಕ ಬೇಡಿಕೆ ಜತೆಗೆ ಬೆಲೆಯೂ ಹೆಚ್ಚಿಗೆ ಸಿಗುತ್ತದೆ. ಆದರೆ ಈ ವರ್ಷ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಸ್ಥಳೀಯ ಫಸಲಿಗೆ ಹಡೆತಬಿದ್ದಿದೆ.

ಎಲ್ಲೆಲ್ಲಿ ಬೆಳೆಯುತ್ತಾರೆ: ಅಳವಂಡಿ ಹೋಬಳಿಯ ಕವಲೂರು, ಅಳವಂಡಿ, ಘಟ್ಟಿರಡ್ಡಿಹಾಳ, ಗುಡಗೇರಿ, ಮುರ್ಲಾಪುರ, ಹಂದ್ರಾಳ ಇತರ ಗ್ರಾಮಗಳ ರೈತರು ಮುಂಗಾರು ಪೂರ್ವ ಮಳೆಯಾದರೆ ಕೊತ್ತಂಬರಿ ಬಿತ್ತುತ್ತಾರೆ.
 ಸಾಮಾನ್ಯವಾಗಿ ಖುಷ್ಕಿ ಭೂಮಿಯಲ್ಲಿ ಅದರಲ್ಲೂ ಎರೆಭೂಮಿಯಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಅಲ್ಪಾವಧಿ ಬೆಳೆಯಾದ್ದರಿಂದ 45 ರಿಂದ 50 ದಿನಗಳಲ್ಲಿ ಕಟಾವು ಮುಗಿದಿರುತ್ತದೆ. ಬಿತ್ತಿದ 35 ರಿಂದ 45 ದಿನಗಳಲ್ಲಿ ಫಸಲು ಕೀಳಲು ಬರುತ್ತದೆ. 
ಬಿತ್ತನೆಗೆ ಎಕರೆಗೆ ಉಳುಮೆ, ಬೀಜ, ಗೊಬ್ಬರ ಸೇರಿ 5 ಸಾವಿರ ರೂ. ಖರ್ಚು ಬರುತ್ತದೆ. ಆದರೆ ಇದು ಬೆಳೆದ ನಂತರ ಕೀಳುವ ಖರ್ಚು ಇಲ.್ಲ ಕಾರಣ ಹೊಲವನ್ನು ಗುತ್ತಿಗೆ ಪಡೆದ ದಲ್ಲಾಳಿಗಳೇ ಕಿತ್ತುಕೊಂಡು ಹೋಗುತ್ತಾರೆ.

ಇತ್ತೀಚಿನ ದಿನಮಾನದಲ್ಲಿ ದಿಡೀರ್ ಹಾರಕ್ಕೆ ಬೇಡಿಕೆ ಹೆಚ್ಚಿದೆ. ಸಿಹಿ ಪದಾರ್ಥ ಹೊರತು ಎಲ್ಲ ತಿನಿಸುಗಳಲ್ಲಿ ಕೊತ್ತಂಬರಿ ಬಳಕೆ ಇದೆ. ಹಾಗೂ ಈ ಭಾಗದಲ್ಲಿ ಬೆಳೆದ ಕೊತ್ತಂಬರಿ ಅಧಿಕ ಸುವಾಸನೆ, ರುಚಿ ಇದ್ದು ಹೆಚ್ಚು ದಿನ ಬಾಳಿಕೆ ಬರುವುದರಿಂದ ಬೇಡಿಕೆ ಹೆಚ್ಚು ಇದೆ.

ಕೆಲವೊಮ್ಮೆ ಕೊತ್ತಂಬರಿ ಮಾರಾಟ ಆಗದಿದ್ದರೆ ಅದನ್ನು ಹವೀಜ ಬೀಜ ಮಾಡುತ್ತಾರೆ. ಇನ್ನು ಕೆಲ ರೈತರು ಕೊತ್ತಂಬರಿ ಫಸಲು ಹರಗಿ ಬೇರೊಂದು ಬೆಳೆ ಬೆಳೆಯುತ್ತಾರೆ. ಕಾರಣ ಕೊತ್ತಂಬರಿ ಜಮೀನು ಫಲವತ್ತೆಯಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ.

ಬೇರೆ ರಾಜ್ಯಗಳಿಗೆ ಅಥವಾ ನಿರ್ದಿಷ್ಟಪಡಿಸಿದ ನಗರಗಳಿಗೆ ಕೊತ್ತಂಬರಿಯನ್ನು ಸ್ಥಳೀಯ ದಲ್ಲಾಳಿಗಳು ಪೂರೈಸುತ್ತಾರೆ. ಕೊತ್ತಂಬರಿ ಜಮೀನನ್ನು ಅದರ ಬೆಳವಣಿಗೆ ಪ್ರಮಾಣದ ಮೇಲೆ ಖರೀದಿಸುತ್ತಾರೆ. ಕಳೆದ ವರ್ಷ ಎಕರೆಗೆ 10 ರಿಂದ 15 ಸಾವಿರದವರೆಗೂ ವ್ಯಾಪಾರ ಆಗಿದೆ.

ಪ್ರಸಕ್ತ ವರ್ಷ ಕಡಿಮೆ ಬೇಡಿಕೆ ಹಾಗೂ ಬೆಳವಣಿಗೆ ಕುಂಠಿತದಿಂದ ಎಕರೆಗೆ 5 ಸಾವಿರಕ್ಕೆ ಮಾತ್ರ ವ್ಯಾಪಾರ ಆಗುತ್ತಿದೆ. ಹೀಗಾಗಿ ರೈತರು ಹಾಗೂ ಖರೀದಿದಾರರಿಗೆ ಲಾಭವಿಲ್ಲದಂತಾಗಿದೆ.

ಕವಲೂರು ವ್ಯಾಪ್ತಿಯ ಗ್ರಾಮಗಳು ಬಹುತೇಕ ಎರೆಭೂಮಿ ಹೊಂದಿವೆ. ಅಲ್ಪಾವಧಿ ಬೆಳೆಯಾದ ಕೊತ್ತಂಬರಿಯನ್ನು ಹೆಚ್ಚಾಗಿ ಬಿತ್ತುತ್ತಾರೆ. ಕಡಿಮೆ ಸಮಯದಲ್ಲಿ ಆದಾಯ ಸಿಗುವ ಬೆಳೆಯಾಗಿದೆ. ಈ ವರ್ಷ ಮುಂಗಾರು ಮಳೆ ಕಡಿಮೆಯಾಗಿ ಇಳುವರಿ ಕಡಿಮೆಯಾಗಿದೆ. ಪ್ರತಾಪಗೌಡ ನಂದನಗೌಡ್ರ, ಕೃಷಿ ಅಧಿಕಾರಿ ಅಳವಂಡಿ ಈ ಭಾಗದಲ್ಲಿ ಬೆಳೆದ ಕೊತ್ತಂಬರಿಗೆ ಮಹಾರಾಷ್ಟ್ರ, ಮೈಸೂರ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ ಮುಂತಾದ ಕಡೆ ಭಾರಿ ಬೇಡಿಕೆ ಇದೆ. ಇಲ್ಲಿನ ಕೊತ್ತಂಬರಿ ಸುವಾಸನೆ ಜಾಸ್ತಿ ಹೀಗಾಗಿ ಬೇಡಿಕೆ ಇದೆ. ಈ ವರ್ಷ ಮಳೆ ಕಡಿಮೆಯಾಗಿ ಬೆಳೆ ಚೆನ್ನಾಗಿ ಬೆಳೆಯದ ಕಾರಣ ಬೇಡಿಕೆ ಕಡಿಮೆಯಾಗಿದೆ. ಹನುಮಂತ ಗೊಂಡಬಾಳ, ಕೊತ್ತಂಬರಿ ಖರೀದಿದಾರ ಕೊತ್ತಂಬರಿ ಅಲ್ಪ ಸಮಯದಲ್ಲಿ ರೈತರಿಗೆ ಲಾಭ ತಂದು ಕೊಡುವ ಬೆಳೆಯಾಗಿದೆ. ಇದರ ಕಟಾವು ನಂತರ ಹಿಂಗಾರು ಹಂಗಾಮಿನ ಬಿತ್ತನೆಗೂ ಜಮೀನು ಲಭ್ಯವಾಗುತ್ತದೆ. ಈ ವರ್ಷ ಮಳೆ ಕಡಿಮೆಯಾಗಿದ್ದರಿಂದ ಕೊತ್ತಂಬರಿ ಹುಲುಸಾಗಿ ಬೆಳೆಯದೆ ಬೇಡಿಕೆ ಕುಸಿದಿದ್ದು ನಷ್ಟ ಅನುಭವಿಸುವಂತಾಗಿದೆ. ಅಂದಾನಗೌಡ ಪೋಲಿಸಪಾಟೀಲ, ಮುರ್ಲಾಪುರ, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net