ರೈತಸ್ನೇಹಿ ಫಾರ್ಮ್​ ಲ್ಯಾಂಡ್ ಕ್ವಾಡ್ ಬೈಕ್: ರೈತರ ಶ್ರಮ ಸುಲಭಗೊಳಿಸಲು ನೆರವು

Quad Bike
Published on

| ಎನ್.ಎಲ್. ಶಿವಮಾದು ಬೆಂಗಳೂರು

ಕೀಟನಾಶಕ ಸಿಂಪಡಣೆ, ಕಳೆ ತೆಗೆಯುವುದು, ಸಣ್ಣ ಪ್ರಮಾಣದ ಸರಕು ಸಾಗಿಸಲು ಫಾರ್ಮ್​ಲ್ಯಾಂಡ್ ಕ್ವಾಡ್ ಬೈಕ್ ಅನ್ನು ಸಂಶೋಧನೆ ನಡೆಸಲಾಗಿದೆ. ರಾಯಲ್ ಎನ್​ಫೀಲ್ಡ್ ಮಾದರಿಯಲ್ಲಿ ಕಾಣುವ ಮತ್ತು ರೈಡ್ ಮಾಡಲು ಸಖತ್ ಖುಷಿಕೊಡುವ ಈ ಬೈಕ್ ಅನ್ನು ಜಿಕೆವಿಕೆಯಲ್ಲಿ ಆಯೋಜಿಸಿರುವ ‘ಕೃಷಿ ಮೇಳ’ದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಕೃಷಿ ಚಟುವಟಿಕೆಗಾಗಿ ಓಡಾಡಲು ಕೂಡ ಬಳಸಬಹುದಾಗಿದೆ.

ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ವಿಶ್ವನಾಥ್ ಎಂಬುವರು ನವೋದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಯಂತ್ರೋಪಕರಣಗಳನ್ನು ಸಂಶೋಧನೆ ಮಾಡಬೇಕು, ರೈತರ ಶ್ರಮವನ್ನು ಸುಲಭಗೊಳಿಸಲು ನೆರವಾಗಬೇಕೆಂಬ ಉದ್ದೇಶದಿಂದ ಈ ಯಂತ್ರವನ್ನು ಸಂಶೋಧನೆ ನಡೆಸಿದ್ದಾರೆ.

ಯಾವೆಲ್ಲ ಕೃಷಿ ಚಟುವಟಿಕೆಗಳಿಗೆ ಅನುಕೂಲ?: ಅಡಿಕೆ, ತೆಂಗು, ಮಾವು, ಬಾಳೆ ಸೇರಿ ತೋಟಗಾರಿಕಾ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ, ಗೊಬ್ಬರವನ್ನು ಮನೆಯಿಂದ ತೋಟಗಳಿಗೆ ಕೊಂಡೊಯ್ಯಲು, 500ಕ್ಕೂ ಹೆಚ್ಚಿನ ತೆಂಗಿನಕಾಯಿ, ಹುಲ್ಲುಗಳನ್ನು ತೋಟದಿಂದ ಮನೆಗೆ ತರುವುದು ಸೇರಿ ಇತರೆ ಕೃಷಿ ಚಟುವಟಿಕೆಗಳಿಗೆ ಬಳಸಬಹುದಾಗಿದೆ. ಮುಂದಿನ ದಿನಗಳಲ್ಲಿ ಟಿಲ್ಲರ್, ವೀಡ್ ಕಟರ್, ಕಾರ್ಬನ್ ಫೈಬರ್ ದೋಟಿ, ಅಲ್ಯೂಮಿನಿಯಂ ದೋಟಿ/ ಏಣಿ ಗಾರ್ಡನ್ ಟೂಲ್ಸ್​ಗಳನ್ನು ಸೇರ್ಪಡೆ ಮಾಡಿ ಅಪ್​ಗ್ರೇಡ್ ಮಾಡುವ ಆಲೋಚನೆ ಹೊಂದಲಾಗಿದೆ ಎನ್ನುತ್ತಾರೆ ತಯಾರಕ ವಿಶ್ವನಾಥ್. ಶಿವಮೊಗ್ಗದಲ್ಲಿ ವಾಹನ ತಯಾರಿಕೆ ಮಾಡಲಾಗುತ್ತಿದೆ. ಈ ವಾಹನವನ್ನು ಕೀಳಂಬಿ ಅಗ್ರಿ ಟೂಲ್ಸ್​ನೊಂದಿಗೆ ಮಾರ್ಕೆಟ್ ಸಹಯೋಗ ಹೊಂದಿದೆ. ಇತ್ತೀ ಚಿನ ದಿನಗಳಲ್ಲಿ ಪ್ರಚಾರ ದೊರೆಯುತ್ತಿರುವ ಕಾರಣ ಬೇಡಿಕೆ ಬರುತ್ತಿದೆ ಎನ್ನುತ್ತಾರೆ.

40 ಸಾವಿರ ರೂ. ಸಬ್ಸಿಡಿ: ಈ ವಾಹನವನ್ನು ಕೇವಲ 2.10 ಲಕ್ಷ ರೂ.ಗಳಿಗೆ ನೀಡಲಾಗುತ್ತಿದೆ. ಸರ್ಕಾರದಿಂದ (ತೋಟಗಾರಿಕೆ ಇಲಾಖೆ) ನೀಡುವ ಸಬ್ಸಿಡಿ ಹೊರತುಪಡಿಸಿ 1.70 ಲಕ್ಷ ರೂ. ಗಳಿಗೆ ವಾಹನ ದೊರೆಯಲಿದೆ.

ಏನೆಲ್ಲ ಫೀಚರ್ಸ್ ಇವೆ?

ಕ್ವಾಡ್ ಬೈಕ್ 600 ಕೆ.ಜಿ. ತೂಕ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಟಿವಿಎಸ್ ಅಪಾಚಿ 180 ಸಿಸಿ ಇಂಜಿನ್ ಬಳಸಿಕೊಂಡು ಯಂತ್ರ ತಯಾರಿಸಲಾಗಿದೆ. ಸೆಲ್ಪ್ ಸ್ಟಾರ್ಟರ್, ರಿವರ್ಸ್ ಗೇರ್, ಇಂಡಿವಿಷ್ಯುವಲ್, ಸಸ್ಪೆನ್​ಷನ್ ಹಾಗೂ ಆಂಟಿ ರೋಲ್ ತಂತ್ರಜ್ಞಾನವನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net