

ಹೊಳಲ್ಕೆರೆ: ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಬರಗಾಲಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ ಹೇಳಿದರು.
ಚಿಕ್ಕಜಾಜೂರು ಗ್ರಾಮದ ಕೆ.ವಿ.ಕಲ್ಲೇಶಪ್ಪ ಅವರ ಜಮೀನಿಗೆ ಗುರುವಾರ ಮಂಜುನಾಥ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆ ಪರಿಶೀಲಿಸಿದರು.
ಬಳಿಕ ಮಾತನಾಡಿ, ಆಗಸ್ಟ್ ತಿಂಗಳಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಮುಂದಿನ ವಾರದಲ್ಲಿ ವರುಣ ಕೃಪೆ ತೋರಿದರೆ ಬೆಳೆಗಳು ಮತ್ತೆ ಚಿಗುರಿ ಹಸಿರು ಕಾಣಲಿವೆ. ಇಲ್ಲವಾದಲ್ಲಿ ರೈತನಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದರು.
ಕೃಷಿ ಅಧಿಕಾರಿ ಮಂಜುನಾಥ ಮೇಗಳಮನಿ ಮಾತನಾಡಿ, ಸಕಾಲಕ್ಕೆ ಮಳೆ ಬಾರದೆ ಇರುವ ಕಾರಣದಿಂದ ಕೆಲ ರೈತರು ರಾಗಿ ಬೆಳೆಯುವ ಕಡೆ ಗಮನಹರಿಸಿದ್ದಾರೆ.
ಹಿಂಗಾರು ಮಳೆ ಉತ್ತಮವಾಗಿ ಬಿದ್ದರೆ ರೈತರ ಮುಖದಲ್ಲಿ ಮಂದಹಾಸ ಕಾಣಬಹುದು ಎಂದು ತಿಳಿಸಿದರು. ಡಾ.ಓಂಕಾರಪ್ಪ, ಡಾ.ಮಹಾಂತೇಶ್ ತಜ್ಞರ ತಂಡದಲ್ಲಿದ್ದರು.