ಅನ್ನದಾತರ ಉತ್ತೇಜನಕ್ಕೆ ಬಹುಮಾನ ವಿತರಣೆ- ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿಕೆ

120220 Siriguppa Oxen Programme
Published on

ಸಿರಗುಪ್ಪ: ರೈತರ ಕೃಷಿಗೆ ಹೆಗಲುಕೊಟ್ಟು ದುಡಿಯುವ ಎತ್ತುಗಳನ್ನು ನಮ್ಮ ಹಿರಿಯರು ಬಸವಣ್ಣನೆಂದು ದೇವರ ಸ್ಥಾನ ನೀಡಿ ಪೂಜಿಸುವ ಸಂಸ್ಕೃತಿ ಹಾಕಿಕೊಟ್ಟಿದ್ದಾರೆ. ಉತ್ತಮ ತಳಿಯ ರಾಸುಗಳಿದ್ದಲ್ಲಿ ರೈತರ ಕೃಷಿ ಕಾರ್ಯಗಳು ಸುಗಮವಾಗಿ ಸಾಗಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ತಾಲೂಕಿನ ರಾರಾವಿ ಗ್ರಾಮದ ಹುತ್ತಿನ ಯಲ್ಲಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಎತ್ತುಗಳ ಪರಿಷೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಮಾರುಕಟ್ಟೆ ಸಮಿತಿಯಿಂದ ಉತ್ತಮ ತಳಿಯ ಎತ್ತುಗಳನ್ನು ಪಶುವೈದ್ಯರಿಂದ ಪರೀಕ್ಷೆ ಮಾಡಿಸಿ ಬಹುಮಾನ ನೀಡಿ ರೈತರನ್ನು ಉತ್ತೇಜಿಸಲಾಗುತ್ತಿದೆ. ಮುಂದಿನ ವರ್ಷದಿಂದ ಪ್ರಥಮ ಬಹುಮಾನವನ್ನು 10 ಸಾವಿರ ರೂ.ಯಿಂದ 25 ಸಾವಿರ ರೂ.ಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಹಾಗಲೂರು ಮಲ್ಲನಗೌಡ ಮಾತನಾಡಿ, ರೈತರಿಗಾಗಿ ಎಪಿಎಂಸಿಯಿಂದ ಅನೇಕ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿ ಕಾರ್ಯದಲ್ಲಿ ಸಂಭವಿಸುವ ಅನಾಹುತಗಳಿಗೆ ರೈತ ಸಂಜೀವಿನಿ ಯೋಜನೆಯಡಿ ರೈತರು ಪರಿಹಾರ ಪಡೆಯಬಹುದು. ರೈತರು ಎಪಿಎಂಸಿಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಸರ್ಕಾರದಿಂದ ದೊರೆಯುವ ಬೆಂಬಲ ಬೆಲೆಯ ಲಾಭ ಪಡೆಯಬೇಕು ಎಂದರು.

ಬಹುಮಾನ ವಿತರಣೆ: ತಾಲೂಕಿನ ವೆಂಕಟಾಪುರದ ರೈತ, ನಾಯಕರ ಯಂಕಣ್ಣ ಅವರ ಕಿಲಾರಿ ತಳಿಯ ಜೋಡೆತ್ತುಗಳಿಗೆ 10 ಸಾವಿರ ರೂ. (ಪ್ರಥಮ) ಹಾಗೂ ರಾರಾವಿ ಗ್ರಾಮದ ರೈತ ರಾಮರೆಡ್ಡಿಮಾರೇಶ ಅವರ ಕಿಲಾರಿ ತಳಿಯ ಜೋಡೆತ್ತುಗಳಿಗೆ 7,500ರೂ.(ದ್ವಿತೀಯ) ಮತ್ತು ರಾರಾವಿ ಗ್ರಾಮದ ಮುದುಕಪ್ಪರ ಜೋಡೆತ್ತುಗಳಿಗೆ 5 ಸಾವಿರ ರೂ.(ತೃತೀಯ ಬಹುಮಾನ), ಪ್ರಮಾಣಪತ್ರ ವಿತರಿಸಲಾಯಿತು. ಎಪಿಎಂಸಿ ಉಪಾಧ್ಯಕ್ಷ ಕೆ.ಬಸವರಾಜ, ಕಲಬುರಗಿ ವಿಭಾಗೀಯ ವ್ಯವಸ್ಥಾಪಕ ಆನಂದ್, ಎಪಿಎಂಸಿ ಸದಸ್ಯರಾದ ಗಿರೀಶ ಗೌಡ, ಶರಣಬಸವ, ಮುಖಂಡರಾದ ಶೇಷಪ್ಪ, ಪಕ್ಕೀರಪ್ಪ, ನಾಗೇಶಪ್ಪ, ದೊಡ್ಡವೀರನಗೌಡ, ಎಂ.ಆರ್.ಗೌಡ, ಈರಪ್ಪ, ಸಣ್ಣ ಪಕ್ಕೀರಪ್ಪ, ಕಾಳಿಂಗಪ್ಪ ರೈತರು ಇದ್ದರು. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಕಲಬುರಗಿ ವಿಭಾಗೀಯ ಎಪಿಎಂಸಿ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net