ಕೃಷಿಕರಿಗೆ ಸಂಕಷ್ಟ ತಂದೊಡ್ಡಿದ ಕೃಷ್ಣಾ ನೆರೆ

28-DVD-1
Published on

ದೇವದುರ್ಗ: ತಾಲೂಕಿನ ಕೃಷ್ಣಾ ನದಿ ದಂಡೆ ಗ್ರಾಮಗಳ ರೈತರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿರುವುದು ರೈತರಲ್ಲಿ ಕಳವಳಕ್ಕೆ ಕಾರಣವಾಗಿದೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾನುವಾರ 3,27,366 ಕ್ಯೂಸೆಕ್ ನೀರು ಹರಿಸಲಾಗಿದೆ.

ಬಸವಸಾಗರ ಜಲಾಶಯಕ್ಕೆ ಭಾನುವಾರ ಬೆಳಗ್ಗೆ 3.2 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 30 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ 3,27,366 ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ತಗ್ಗಿಸಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಭಾನುವಾರ ನದಿಗೆ ಹೆಚ್ಚುವರಿಯಾಗಿ 27,366 ಕ್ಯೂಸೆಕ್ ಹರಿದು ಬಂದಿದ್ದರಿಂದ ನದಿದಂಡೆಯಲ್ಲಿ ಮತ್ತಷ್ಟು ಜಮೀನಿಗೆ ನೀರುನುಗ್ಗಿದೆ.

ಲಿಂಗದಹಳ್ಳಿ, ಬಾಗೂರು, ಅಂಜಳ, ಗೋಪಳಾಪುರ, ಹೂವಿನಹೆಡಗಿ, ಕೊಪ್ಪರ, ಹೇರೂರು ಗ್ರಾಮದಲ್ಲಿ ಹಾನಿಯಾಗಿದೆ. ಕೊಪ್ಪರದಲ್ಲಿ ಅತಿ ಹೆಚ್ಚು ರೈತರ ಜಮೀನಿಗೆ ನೀರುನುಗ್ಗಿದೆ. ಅಧಿಕಾರಿಗಳು ನದಿದಂಡೆ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬವ ಕೆಲಸ ಮಾಡುತ್ತಿದ್ದಾರೆ.
ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ನದಿದಂಡೆ ಮೇಲಿರುವ ಹೋಟೆಲ್, ಮನೆಗಳ ಮುಂದೆ ನೀರುಬಂದಿವೆ.

ಗಡ್ಡೆಗೂಳಿಬಸವೇಶ್ವರ ದೇವಸ್ಥಾನ ಒಂದು ವಾರದಿಂದ ಮುಳುಗಡೆಯಾಗಿದೆ. ವೀರಗೋಟದ ಮೌನಲಿಂಗೇಶ್ವರ ದೇವಸ್ಥಾನದ ಮೆಟ್ಟಿಲು ಹಲವು ದಿನಗಳಿಂದ ನೀರಲ್ಲಿ ಮುಳುಗಿವೆ. ಅಂಜಳ ಗ್ರಾಮದ ಬಸವೇಶ್ವರ ದೇವಸ್ಥಾನ, ಕೊಪ್ಪರದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಶ್ರೀ ಆಂಜನೇಯ ದೇವಸ್ಥಾನ ಜಲಾವೃತಗೊಂಡಿದ್ದು ಪೂಜಾಕಾರ್ಯ, ಭಕ್ತರ ದರ್ಶನಕ್ಕೆ ಸಮಸ್ಯೆಯಾಗಿದೆ. ಅರಸಿಣಿಗಿ ಅಣೆಮಲ್ಲೇಶ್ವರ ದೇವಸ್ಥಾನ ಹಾಗೂ ಗೂಗಲ್ ಅಲ್ಲಪ್ರಭು ದೇವಸ್ಥಾನದ ಗೋಡೆಗೆ ನೀರು ತಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net