

ಶ್ರೀರಂಗಪಟ್ಟಣ; ತಾಲೂಕಿನ ಬಳ್ಳೆಕೆರೆ ಗ್ರಾಮದಲ್ಲಿ ಶನಿವಾರ ಜಮೀನಿನ ಪಂಪ್‌ಸೆಟ್‌ಗೆ ನೀಡಿದ್ದ ವಿದ್ಯುತ್ ಸಂಪರ್ಕದ ವೈಯರ್ ಪರಿಶೀಲಿಸುತ್ತಿದ್ದ ಯುವ ರೈತ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗ್ರಾಮದ ಚಿಕ್ಕತಮ್ಮೇಗೌಡರ ಪುತ್ರ ಸೂರ್ಯ(27) ಮೃತ. ಇವರು ಗ್ರಾಮದ ಹೊಸಕೆರೆ ಕಟ್ಟೆ ಬಳಿ ಇದ್ದ ತಮ್ಮ ಕೃಷಿ ಜಮೀನಿಗೆ ನೀರು ಹಾಯಿಸಲು ವಿದ್ಯುತ್ ಸಂಪರ್ಕದೊಂದಿಗೆ ಅಳವಡಿಸಿದ್ದ ಪಂಪ್‌ಸೆಟ್ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ತೇವಾಂಶ ಭೂಮಿಯಲ್ಲಿ ನಿಂತು ವಿದ್ಯುತ್ ವೈಯರ್ ಹಿಡಿದು ಪರಿಶೀಲಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ತಕ್ಷಣ ಸೆಸ್ಕ್ ಅಧಿಕಾರಿಗಳು ಹಾಗೂ ಅರಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಕೆರೆ ವಿದ್ಯುತ್ ಉಪ ವಿಭಾಗದ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಅರಕೆರೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಶವ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.