

ಕಿಕ್ಕೇರಿ : ಹೋಬಳಿಯ ಕೋಟಹಳ್ಳಿ ಗ್ರಾಮದಲ್ಲಿ ಶನಿವಾರ ವಿದ್ಯುತ್ ತಂತಿ ತುಳಿದು ರೈತ ಮೃತಪಟ್ಟಿದ್ದಾರೆ. ರಾಜೇಗೌಡ ಅವರ ಪುತ್ರ ಹರೀಶ್(32) ಮೃತ. ಹರೀಶ್ ಜಮೀನಿಗೆ ನೀರು ಹಾಯಿಸಲು ತೆರಳಿದ್ದರು. ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಕಾಣದೆ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಹಳ ಹೊತ್ತು ಮನೆಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮನೆಯವರು ಜಮೀನಿಗೆ ಬಂದು ನೋಡಿದಾಗ ಹರೀಶ್ ಮೃತಪಟ್ಟಿರುವುದು ಗೊತ್ತಾಗಿದೆ. ಶಾಸಕ ಎಚ್.ಟಿ.ಮಂಜು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡರು. ಮೃತದೇಹವನ್ನು ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಭಾನುವಾರ ಮೃತರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ದ್ದಾರೆ.