

ಹಾನಗಲ್ಲ: ವಿದ್ಯುತ್ ಸಮಸ್ಯೆ ಪರಿಹರಿಸಲು ಹೆಸ್ಕಾಂ ಲೈನ್‌ಮನ್ ಮಾಡಿದ ಎಡವಟ್ಟಿನಿಂದಾಗಿ ರೈತನೊಬ್ಬ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಹಿರೇಹುಲ್ಲಾಳ ಗ್ರಾಮದ ರೈತ ಕಾಶಿನಾಥ ಗುಡ್ಡಪ್ಪ ಕಮ್ಮಾರ (32) ಮೃತಪಟ್ಟ ರೈತ. ವಿದ್ಯುತ್‌ಲೈನ್ ಸಮಸ್ಯೆ ಸರಿಪಡಿಸಬೇಕಿದ್ದ ಹೆಸ್ಕಾಂ ನೌಕರ ತಿರುಪತಿ ಎಂಬಾತ ತನ್ನ ಬದಲು ರೈತ ಕಾಶೀನಾಥನನ್ನು ವಿದ್ಯುತ್ ಕಂಬದ ಮೇಲೆ ಹತ್ತಿಸಿದ್ದ ಎನ್ನಲಾಗಿದೆ. ಆದರೆ, ವಿದ್ಯುತ್ ಲೈನ್ ದುರಸ್ತಿಗೂ ಮುನ್ನ ವಿದ್ಯುತ್ ಸ್ಟೇಶನ್‌ನಿಂದ ಎಲ್‌ಸಿಯನ್ನು ಪಡೆದಿರಲಿಲ್ಲ. ಕಂಬದ ಮೇಲೆ ಹತ್ತಿದ ಕಾಶೀನಾಥನಿಗೆ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಮೃತಪಟ್ಟಿದ್ದಾನೆ. ತುಮರಿಕೊಪ್ಪ-ಆರೇಲಕಮಾಪುರ-ಹಿರೇಹುಲ್ಲಾಳ ಮಾರ್ಗ ಮಧ್ಯದಲ್ಲಿರುವ ಕರೆಕಟ್ಟಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಲೈನ್‌ಮನ್‌ನ ಎಡವಟ್ಟಿಗೆ ರೈತ ಬಲಿಯಾಗಿದ್ದಾನೆ. ಕಾಶೀನಾಥ ಕಂಬದಿಂದ ಕೆಳಗೆ ಬಿದ್ದ ತಕ್ಷಣ ಲೈನ್‌ಮನ್ ತಿರುಪತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೈನ್‌ಮನ್‌ನ ತಪ್ಪಿನಿಂದಾಗಿ ರೈತ ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಡೂರ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದ ಸಮೀಪ ಹಾವೇರಿ-ಶಿರಸಿ ಹೆದ್ದಾರಿ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದರು. ಘಟನೆಗೆ ಕಾರಣರಾದ ಹೆಸ್ಕಾಂ ಸಿಬ್ಬಂದಿಯನ್ನು ತಕ್ಷಣ ಅಮಾನತ್ತುಗೊಳಿಸಬೇಕು. ಮೃತನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವಾಹನ ಸಂಚಾರ ತಡೆ ನಡೆಸಿದರು. ಹೆದ್ದಾರಿಯಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕಾಗಮಿಸಿದ ಹೆಸ್ಕಾಂ ಎಇಇ ಆನಂದ ಸುವರ್ಣಕರ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿ ವಿಲರಾದರು. ಎಎಸ್‌ಪಿ ಎಲ್.ವೈ. ಶಿರಕೋಳ, ಶಿಗ್ಗಾಂವಿ ಡಿಎಸ್‌ಪಿ ಕೆ.ವಿ. ಗುರುಶಾಂತಪ್ಪ ಸ್ಥಳಕ್ಕೆ ಭೇಟಿ ನೀಡಿದರು.
2ನೇ ಬಲಿ ಪಡೆದ ತಿರುಪತಿ
ಲೈನ್‌ಮನ್ ತಿರುಪತಿ ಕಳೆದ 3 ವರ್ಷಗಳ ಹಿಂದೆ ಹೇರೂರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಗ್ರಾಮದ ಬಸವೇಶ್ವರ ದೇವಸ್ಥಾನದ ಪಕ್ಕ ದುರಸ್ತಿಗಾಗಿ ಅಮಾಯಕ ವ್ಯಕ್ತಿಯನ್ನು ವಿದ್ಯುತ್ ಕಂಬ ಹತ್ತಿಸಿ ದುರಸ್ತಿ ಮಾಡಿಸಲು ಮುಂದಾಗಿದ್ದ. ಆಗ ಕೂಡ ವಿದ್ಯುತ್ ಕಂಬ ಹತ್ತಿದ್ದ ಕೀರೇಶ ಮಡಿವಾಳರ ಎಂಬಾತ ವಿದ್ಯುತ್ ಶಾಕ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದ. ಆಗ ತಿರುಪತಿಯನ್ನು ಅಮಾನತುಗೊಳಿಸಲಾಗಿತ್ತು. ಆ ಘಟನೆಯಿಂದ ಬುದ್ಧಿ ಕಲಿಯದ ತಿರುಪತಿ ಈಗ ಮತ್ತೊಮ್ಮೆ ಅಂಥದ್ದೇ ಎಡವಟ್ಟು ಮಾಡಿಕೊಂಡಿದ್ದಾನೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.