

ಹೊನ್ನಾಳಿ: ಗೋಮಾಳ ಭೂ ಪ್ರದೇಶದಲ್ಲಿ ಮರು ಅರಣ್ಯೀಕರಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ರೈತರಿಗೆ ಭರವಸೆ ನೀಡಿದರು.
ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ರೈತ ಸಂಪರ್ಕ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರಿಗೆ ಈಗಾಗಲೇ ದೊರೆತಿರುವ ಜಮೀನುಗಳಲ್ಲಿ ಅರಣ್ಯ ಇಲಾಖೆಯವರು ಮರು ಅರಣ್ಯ ಮಾಡಲು ಅವಕಾಶಕ್ಕಾಗಿ ಕೇಳುತ್ತಿದ್ದಾರೆ. ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಬೇಕು. ಬೆಳೆಗಳ ಬಗ್ಗೆ ಕಾಲಕಾಲಕ್ಕೆ ಸಂಪೂರ್ಣ ಮಾಹಿತಿ ನೀಡಿ, ರೈತರ ಬೆಳೆ ಸಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ತಿಳಿಸಬೇಕು ಎಂದು ಸೂಚಿಸಿದರು.
ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸಂಬಂಧಿಸಿದ ಅಧಿಕಾರಿಗಳು ಪ್ರತಿ ತಿಂಗಳು ವೇತನ ನೀಡದಿದ್ದರೆ ಮಾನವ ಹಕ್ಕು ಉಲ್ಲಂಘನೆಯಾಗಲಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಕುರುವ ಗಣೇಶಪ್ಪ ಮಾತನಾಡಿ, ತಾಲೂಕಿನಲ್ಲಿ ಮಳೆ ಇಲ್ಲದೆ ತೀವ್ರ ಬರ ಇದ್ದು, ಬ್ಯಾಂಕ್ ಹಾಗೂ ಇತರ ಆರ್ಥಿಕ ಸಂಸ್ಥೆಯವರು ಸಾಲ ವಸೂಲಾತಿ ನೆಪದಲ್ಲಿ ರೈತರಿಗೆ ತೊಂದರೆ ನೀಡಬಾರದು ಎಂದರು.
ರೈತ ಮುಖಂಡ ಬಸವರಾಜಪ್ಪ ಮಾತನಾಡಿ, ತುಂಗಾ ಮೇಲ್ದಂಡೆ ಯೋಜನೆಯ ತುಂಗಾನಾಲೆಯ ಇಕ್ಕೆಲದಲ್ಲಿ ಜಾಲಿ ಇತರ ಗಿಡ, ಗಂಟೆಗಳು ಬೆಳೆದು ಕಾಡು ಸೃಷ್ಟಿಯಾಗಿದೆ. ಯುಟಿಪಿ ಇಂಜಿನಿಯರ್‌ಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಯಾವುದೇ ಅನುದಾನ ಇರುವುದಿಲ್ಲ ಎಂದು ಯುಟಿಪಿ ಇಂಜಿನಿಯರ್ ಮಂಜುನಾಥ ಹೇಳಿದರು.
ರೈತ ಮುಖಂಡ ಬೆಳಗುತ್ತಿ ಉಮೇಶ ಮಾತನಾಡಿ, ಹನುಮಸಾಗರ ಗ್ರಾಮದ ಏತ ನೀರಾವರಿ ಕೇಂದ್ರದಿಂದ 37 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸ್ಥಗಿತಗೊಂಡಿದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಪಟ್ಟರಾಜೇಗೌಡ, ವ್ಯವಸ್ಥಾಪಕ ಶಂಬಯ್ಯ, ರಾಜಸ್ವ ನಿರೀಕ್ಷಕ ರಮೇಶ್, ರೈತರು, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.