ರೈತರ ಮಕ್ಕಳಿಗೆ ವರವಾದ ವಿದ್ಯಾನಿಧಿ ಯೋಜನೆ

education
Published on

ಬಳ್ಳಾರಿ: ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿಗಳಿಗೆ ವರವಾಗಿದೆ.

ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ರೈತರ ಮಕ್ಕಳಿಗೆ ಶಿಷ್ಯವೇತನ ಪ್ರಕಟಿಸಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಪಿಯುಸಿಯಿಂದ ಸ್ನಾತಕೋತ್ತರ ಪದವಿ ಪಡೆದ ರೈತರ ಮಕ್ಕಳಿಗೆ ಅನುಕೂಲವಾಗಿದೆ.

ಇದನ್ನೂ ಓದಿ:

ಜಿಲ್ಲೆಯಲ್ಲಿ 21 ಸಾವಿರ ರೈತರ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಒಟ್ಟು 9.70 ಕೋಟಿ ರೂ.ವಿದ್ಯಾರ್ಥಿಗಳ ಖಾತೆಗೆ ಹಾಕಲಾಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದ್ದು, ಮುಂದಿನ ದಿನಗಳಲ್ಲೂ ಈ ಯೋಜನೆ ಮುಂದುವರೆದರೆ ಬಡಮಕ್ಕಳಿಗೆ ಸಹಕಾರಿಯಾಗಲಿದೆ.

2021ರ ಆಗಸ್ಟ್ 8ರಂದು ಈ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದ್ದು, 2021-22 ಮತ್ತು 2022-23ನೇ ಸಾಲಿನಲ್ಲಿ ಎರಡು ವರ್ಷ ಮಕ್ಕಳಿಗೆ ಶಿಷ್ಯವೇತನ ನೀಡಲಾಗಿದೆ. ಆದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಇನ್ನು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ.

ಏನಿದು ಯೋಜನೆ ?

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ ರಾಜ್ಯದ ಯಾವುದೇ ಭಾಗದಲ್ಲಿರುವ ವಿವಿಗಳು, ಅಧಿಕೃತ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ, ಪದವಿ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆದ ರಾಜ್ಯದ ರೈತರ ಎಲ್ಲ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿ ಮೂಲಕ ಸ್ಕಾಲರ್‌ಷಿಪ್ ತಲುಪಿಸುವ ಯೋಜನೆ ಇದಾಗಿದೆ.

ಕಳೆದ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ 2500 ರೂ. ನಿಂದ 11 ಸಾವಿರ ರೂ. ವರೆಗೆ ರೈತರ ಮಕ್ಕಳಿಗೆ ಶಿಷ್ಯ ವೇತನವನ್ನು ವಾರ್ಷಿಕ ರೂಪದಲ್ಲಿ ಒದಗಿಸುವ ಯೋಜನೆ ಇದಾಗಿದೆ. ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ‌್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ ಮ ಪ್ರಶಸ್ತಿ, ಪ್ರತಿಫಲ ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ ಈ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಯಾರಿಗೆ ಎಷ್ಟು ಶಿಷ್ಯವೇತನ

ಪಿಯುಸಿ,ಐಟಿಐ,ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2500 ರೂ. ವಿದ್ಯಾರ್ಥಿನಿಯರಿಗೆ 3 ಸಾವಿರ ರೂ., ಬಿಎ/ಬಿಎಸ್ಸಿ, ಬಿಕಾಂ ಪದವಿ ವಿದ್ಯಾರ್ಥಿಗಳಿಗೆ 5 ಸಾವಿರ, ವಿದ್ಯಾರ್ಥಿನಿಯರಿಗೆ 5500 ರೂ. ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ, ನರ್ಸಿಂಗ್ ವಿದ್ಯಾರ್ಥಿಗಳಿಗೆ 7500, ವಿದ್ಯಾರ್ಥಿನಿಯರಿಗೆ 8 ಸಾವಿರ ರೂ, ಎಂಬಿಬಿಎಸ್/ಬಿಇ/ಬಿ.ಟೆಕ್ ಹಾಗೂ ಎಲ್ಲ ಸ್ನಾತಕೋತ್ತರ ಕೋರ್ಸ್‌ನ ವಿದ್ಯಾರ್ಥಿಗಳಿಗೆ 10 ಸಾವಿರ ರೂ, ವಿದ್ಯಾರ್ಥಿನಿಯರಿಗೆ 11 ಸಾವಿರ ರೂ. ನೀಡಲಾಗುತ್ತಿದೆ.

ಬಳ್ಳಾರಿ ತಾಲೂಕು ಪ್ರಥಮ ಸ್ಥಾನ

ಜಿಲ್ಲೆಯಲ್ಲಿ 21 ಸಾವಿರ ರೈತರ ಮಕ್ಕಳು ರೈತ ವಿದ್ಯಾನಿಧಿಯ ಪ್ರಯೋಜನ ಪಡೆದುಕೊಂಡಿದ್ದಾರೆ. ಕಳೆದ 2022-23ನೇ ಸಾಲಿನಲ್ಲಿ 20,916 ಮಕ್ಕಳು ಶಿಷ್ಯ ವೇತನ ಪಡೆಯಲು ನೋಂದಣಿ ಮಾಡಿಕೊಂಡಿದ್ದು, ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು (14829)ಸದುಪಯೋಗ ಪಡೆದುಕೊಂಡಿದ್ದು ಪ್ರಥಮ ಸ್ಥಾನದಲ್ಲಿದೆ.

ಕಂಪ್ಲಿ ತಾಲೂಕಿನಲ್ಲಿ (25)ಅತಿಕಡಿಮೆ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದು ಕೊನೇ ಸ್ಥಾನದಲ್ಲಿದೆ. ಯೋಜನೆಯಡಿ ಜಿಲ್ಲೆಯ ಮಕ್ಕಳಿಗೆ ಒಟ್ಟು 9.70 ಕೋಟಿ ರೂ. ಶಿಷ್ಯ ವೇತನ ನೀಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈತರ ಮಕ್ಕಳಿಗೆ ಕಳೆದ 2022-23ನೇ ಸಾಲಿನಲ್ಲಿ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 21 ಸಾವಿರ ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ. ಕಳೆದ ಎರಡು ವರ್ಷ ಮಕ್ಕಳಿಗೆ ಶಿಷ್ಯ ವೇತನ ನೀಡಲಾಗಿದೆ. ಸರ್ಕಾರದ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಡಾ.ಮಲ್ಲಿಕಾರ್ಜುನ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net