ರೈತ ಆತ್ಮಹತ್ಯೆಗೆ ಯತ್ನ

17-GPT-1A
Published on

ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಚನ್ನವಡೆಯನಪುರ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಬೆಳೆ ನಷ್ಟಕ್ಕೊಳಗಾಗಿ ಹತಾಶೆಗೀಡಾದ ರೈತ ಮಂಗಳವಾರ ಕ್ರಿಮಿನಾಶಕ ಕುಡಿಯಲು ಯತ್ನಿಸಿದ ಪ್ರಸಂಗ ಜರುಗಿತು.

ಗ್ರಾಮದ ಸಿಎಂ.ಮಹದೇವಪ್ಪ ಎಂಬುವರ ಜಮೀನಿಗೆ ಸೋಮವಾರ ರಾತ್ರಿ ನುಗ್ಗಿದ ಒಂಟಿ ಸಲಗ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶಪಡಿಸಿದೆ. 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ, 40ಕ್ಕೂ ಹೆಚ್ಚಿನ ತೆಂಗಿನ ಗಿಡಗಳು, ಕಲ್ಲಂಗಡಿ ಫಸಲನ್ನು ಕಿತ್ತು ನಾಶಪಡಿಸಿದೆ.

ಅರಣ್ಯದಿಂದ ನಿತ್ಯ ಆನೆಗಳು ಹೊರಬಂದು ಬೆಳೆಗಳನ್ನು ನಾಶ ಮಾಡುತ್ತಿವೆ. ರಾತ್ರಿ ಕಾವಲಿಗೆ ಹೋಗಲು ಜೀವಭಯ ಸೃಷ್ಟಿಯಾಗಿದೆ. ಈ ಬಗ್ಗೆ ದೂರು ನೀಡಿದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಬೆಳೆ ಹಾನಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ರಾತ್ರಿ ಗಸ್ತು ನಡೆಸುವ ಮೂಲಕ ಆನೆಗಳ ದಾಳಿಯನ್ನು ತಡೆಗಟ್ಟಬೇಕು ಎಂದು ಸಿ.ಎಂ.ಮಹದೇವಪ್ಪ ಪಟ್ಟುಹಿಡಿದರು.

ತುಂಬ ಹೊತ್ತಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಮಹದೇವಪ್ಪ ಕ್ರಿಮಿನಾಶಕ ಕುಡಿಯಲು ಮುಂದಾದರು. ಆಗ ಅಕ್ಕಪಕ್ಕದ ಜಮೀನಿನ ರೈತರು ತಡೆದು, ಕೂಡಲೇ ಬೇಗೂರು ಪೊಲೀಸರಿಗೆ ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ಎಎಸ್‌ಐ ದೊರೆರಾಜು, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಬಳಿಕ ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತನ ಮನವೊಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net