

ಗಂಗಾವತಿ: ರೈತರ ಮೇಲೆ ಕೇಂದ್ರ ಸರ್ಕಾರದ ದೌರ್ಜನ್ಯ ಪ್ರಕರಣ ಖಂಡಿಸಿ ಅಖಿಲ ಭಾರತ ರೈತರ ಸಂಘರ್ಷ ಸಮನ್ವಯ ಸಮಿತಿ, ಎಸ್‌ಎ್ಐ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಸಹಯೋಗದೊಂದಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ನಗರದ ಅಂಚೆ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ರೇಣುಕಾಗೆ ಮನವಿ ಸಲ್ಲಿಸಿದರು.
ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಮಾತನಾಡಿ, ಕೃಷಿ ಮತ್ತು ಕೃಷಿಕರ ವಿರೋಧಿ ಕಾನೂನು ವಾಪಸ್ ಪಡೆಯುವಂತೆ ದೆಹಲಿ ಚಲೋ ಹಮ್ಮಿಕೊಂಡಿದ್ದ ಪಂಜಾಬ್, ಹರಿಯಾಣ ಸೇರಿ ಉತ್ತರ ಭಾರತದ ಕಾರ್ಮಿಕ ಮತ್ತು ಕೂಲಿಕಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು ಖಂಡನೀಯ. ಪೊಲೀಸರ ಮೂಲಕ ಕೇಂದ್ರ ಸರ್ಕಾರ ರೈತರನ್ನು ಹತ್ತಿಕ್ಕುವ ಸಂಚು ನಡೆಸಿದ್ದು, ರೈತರು ಮತ್ತು ಕೂಲಿಕಾರರು ಬಂಧಿಸಿದ್ದು ಸರಿಯಲ್ಲ. ಕೃಷಿ ಉತ್ಪನ್ನ ತಿದ್ದುಪಡಿ, ಬೆಲೆ ಭರವಸೆ ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳಿಂದ ರೈತರಿಗೆ ಅನ್ಯಾಯವಾಗಲಿದ್ದು, ಕೃಷಿ ರಂಗವನ್ನು ಕಾರ್ಪೋರೇಟ್ ಕಂಪನಿಗೆ ವಹಿಸಲು ಕೇಂದ್ರ ಹುನ್ನಾರ ನಡೆಸಿದೆ.
ರೈತರು ಮತ್ತು ಕಾರ್ಮಿಕರಿಗೆ ಮಾರಕವಾದ ಕಾಯ್ದೆ ಕೈಬಿಡುವುದರ ಜತೆಗೆ ಬಂಧಿಸಿರುವ ರೈತರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ವಿವಿಧ ಸಂಘಟನೆ ಪದಾಧಿಕಾರಿಗಳಾದ ಜಿ.ನಾಗರಾಜ್, ಶ್ರೀನಿವಾಸ ಹೊಸಳ್ಳಿ, ಕೆ.ಹುಸೇನಪ್ಪ, ಶಿವಣ್ಣ ಬೆಣಕಲ್, ಮರಿನಾಗಪ್ಪ, ಗ್ಯಾನೇಶ ಕಡಗದ್, ಶಿವಕುಮಾರ ಈಚನಾಳ್, ಹನುಮಂತಪೊಪ, ನಿಂಗಪ್ಪ, ರಾಜಮ್ಮ ಇತರರಿದ್ದರು.