ರೈತ, ಸೈನಿಕ ದೇಶದ ಎರಡು ಕಣ್ಣು

7 KND 1
Published on

ಕುಂದಗೋಳ: ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶಕ್ಕೆ ರೈತ ಹಾಗೂ ಯೋಧ ಎರಡು ಕಣ್ಣುಗಳಿದ್ದಂತೆ. ಹೀಗಾಗಿ ಯೋಧರಿಗೆ ಎಲ್ಲರೂ ಗೌರವ ಕೊಡಬೇಕು ಎಂದು ಕಲ್ಯಾಣಪುರದ ಮಠದ ಶ್ರೀ ಬಸವಣ್ಣಜ್ಜನವರು ಹೇಳಿದರು.

ಬಿಎಸ್‌ಎಫ್‌ನಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಪಟ್ಟಣಕ್ಕೆ ಆಗಮಿಸಿದ ಯೋಧ ವಿಠ್ಠಲ ಕೃಷ್ಣಾಜಿ ಜಾಧವ ಅವರನ್ನು ಪಟ್ಟಣದ ಶಿವಾಜಿ ನಗರದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಸನ್ಮಾನಿಸಿ ಅವರು ಮಾತನಾಡಿದರು.

ತಾಯಿ ಭಾರತಾಂಬೆಯ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. ಇನ್ನು ಮುಂದೆ ನಾವು ಮಾಡುವ ಕಾರ್ಯಕ್ರಮಗಳಿಗೆ ಸಂಬಂಧಿಕರು ಹಾಗೂ ನೆರೆಹೊರೆಯವರನ್ನು ಕರೆಯುವುದಕ್ಕಿಂತ ಮೊದಲು ವೀರ ಯೋಧರಿಗೆ ಆಮಂತ್ರಣ ಕೊಟ್ಟು ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವ ಕೊಡುವಂಥ ಕೆಲಸ ಮಾಡೋಣ ಎಂದರು.

ನಿವೃತ್ತ ಯೋಧ ವಿಠ್ಠಲ ಜಾಧವ ಮಾತನಾಡಿ, ತಂದೆ-ತಾಯಿ, ಕುಟುಂಬ, ಗುರುಗಳು ಹಾಗೂ ಗೆಳೆಯರ ಸಹಕಾರದಿಂದ ದೇಶ ಸೇವೆ ಮಾಡಲು ಅವಕಾಶ ಸಿಕ್ಕಿತು. ನಾನು ಬಿಎಸ್‌ಎಫ್‌ಗೆ 2002 ಜೂನ್ ತಿಂಗಳಲ್ಲಿ ಉದಯಪುರದಲ್ಲಿ 136 ನೇ ಬಟಾಲಿಯನ್‌ನಲ್ಲಿ ಸೇರಿ ಜಮ್ಮು ಕಾಶ್ಮೀರ, ಅಸ್ಸಾಂ, ಮಿಜೋರಾಂ, ಗುಜರಾತ್ ಹೀಗೆ ವಿವಿಧ ಸ್ಥಳಗಳಲ್ಲಿ 22 ವರ್ಷ ಸೇವೆ ಸಲ್ಲಿಸಿದ್ದೇನೆ. ಭಾರತ ಮಾತೆಯ ಸೇವೆ ಮಾಡಿದ್ದು ನನ್ನ ಪುಣ್ಯ. ಇಂದಿನ ಯುವಕರು ಯಾವುದೇ ದುಶ್ಚಟಗಳಿಗೆ ಒಳಗಾಗದೆ ದೇಶ ಸೇವೆ ಮಾಡಲು ಮುಂದಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ನಂತರ ಚಿಲಿ-ಪಿಲಿ ಗೆಳೆಯರ ಬಳಗ ಹಾಗೂ ಛತ್ರಪತಿ ಗ್ರೂಪ್ ವತಿಯಿಂದ ನಿವೃತ್ತ ಯೋಧ ದಂಪತಿ, ತಾಯಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಯೋಧನ ತಾಯಿ ಶಾಂತಾಭಾಯಿ ಜಾಧವ, ಹಿರಿಯರಾದ ಮಲ್ಲಪ್ಪ ಕೊಪ್ಪದ, ದ್ಯಾವಪ್ಪ ಬಡ್ನಿ, ವಿಠ್ಠಲ್ ಚವ್ಹಾಣ, ಜ್ಯೋತಿಬಾ ಕೈರಾಯಿ, ನಿವೃತ್ತ ಯೋಧರಾದ ಗುರುನಾಥ ಭೋವಿ, ಮಂಜುನಾಥ ಅಳಗೋಡಿ, ಪ್ರದೀಪ ಇಂಗಳೆ, ಮಂಜುನಾಥ ಕಬ್ನೂರ, ಎಸ್.ವಿ. ಹುಬ್ಬಳ್ಳಿ, ಮುಖಂಡರಾದ ಷಣ್ಮುಖ ಶಿವಳ್ಳಿ, ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಚಿದಾನಂದ ಬೈರಪ್ಪನವರ, ಬಸವರಾಜ ಪಲ್ಲೇದ, ಗಣೇಶ ಕೊಕಾಟೆ, ಪಾಂಡು ಕುಂಕೂರ, ಶಂಕರ ಪರಮೇಕರ, ಮಂಜುನಾಥ ಭೋಪಳೆ, ಭಾಸ್ಕರ ಪವಾರ, ಚಿಲಿಪಿಲಿ ಗೆಳೆಯರ ಬಳಗದ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net