

ಜಗಳೂರು: ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ, ನಿರಂತರವಾಗಿ ಶ್ರಮಿಸುವ ರೈತರನ್ನು ಗೌರವಿಸಿ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಹೇಳಿದರು.
ತಾಲೂಕಿನ ಅಗಸನಹಳ್ಳಿ ಗ್ರಾಮದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ತಾವು ಹಸಿದಿದ್ದರೂ ಕಷ್ಟಪಟ್ಟು ದುಡಿದು ಇತರರ ಹೊಟ್ಟೆಯನ್ನು ತುಂಬಿಸುತ್ತಾನೆ. ಅವರು ದುಡಿದರೆ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ. ಇದೇ ಕಾರಣಕ್ಕೆ ಅವರನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ ಎಂದರು.
ಭಾರತವನ್ನು ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನ ದೇಶವೆಂದು ಪರಿಗಣಿಸಲಾಗಿದೆ. ಅಂದಾಜಿನ ಪ್ರಕಾರ, ಭಾರತದ ಸುಮಾರು ಶೇ. 60 ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ತಾಲೂಕಿನ ರೈತರು ದಶಕಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಬಗರ್ಹುಕುಂ ಕಾಯ್ದೆಯಡಿ 57 ಅರ್ಜಿ ಸಲ್ಲಿಕೆಯಾಗಿದ್ದು, ಶೀಘ್ರವೇ ವಿಲೇವಾರಿಗೊಳಿಸಿ ಸಾಗುವಳಿ ಚೀಟಿ ವಿತರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷ ರೇವಣಸಿದ್ದಪ್ಪ, ರೈತ ಸಂಘದ ತಾಲೂಕಾಧ್ಯಕ್ಷ ಚಿರಂಜೀವಿ, ಪ್ರಧಾನ ಕಾರ್ಯದರ್ಶಿ ಭೈರನಾಯಕನಹಳ್ಳಿ ರಾಜು, ಮುಖಂಡರಾದ ರಂಗಪ್ಪ, ಅರುಣಕುಮಾರ್, ದಾಸಪ್ಪ, ಪರಸಪ್ಪ, ತಿಪ್ಪೇಸ್ವಾಮಿ, ಹನುಮಂತಪ್ಪ, ಕೊಟ್ರೇಶ್, ಮಹಾಂತೇಶ್, ನಾಗೇಶ್ ಮತ್ತಿತರರಿದ್ದರು.