

ಮಂಡ್ಯ: ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರದಂತಹ ಪ್ರಕರಣಗಳ ವಿಚಾರಣೆ ನಡೆಸಲು ತ್ವರಿತವಾಗಿ ಮಹಿಳಾ ನ್ಯಾಯಾಲಯ ಸ್ಥಾಪಿಸಬೇಕು ಎಂದು ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಂ ಒತ್ತಾಯಿಸಿದರು.
ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ ಸೇರಿದಂತೆ ಮಹಿಳೆಯರ ಮೇಲಿನ ಲೈಂಗಿಕ, ದೈಹಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧಾನ ವಿಳಂಬವಾದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಮಹಿಳಾ ಆಯೋಗದ ಅಧ್ಯಕ್ಷರು ಸಹ ಮಹಿಳಾ ನ್ಯಾಯಾಲಯ ಸ್ಥಾಪನೆಗೆ ಒತ್ತಾಯಿಸಿದ್ದಾರೆ. ಹಾಗಾಗಿ ಸಂತ್ರಸ್ತ ಮಹಿಳೆಯರಿಗೆ ತ್ವರಿತವಾಗಿ ನ್ಯಾಯ ಸಿಗಬೇಕು ಎಂದಾದರೆ ಮಹಿಳಾ ನ್ಯಾಯಾಲಯದಿಂದ ಮಾತ್ರ ಸಾಧ್ಯ. ಅತ್ಯಾಚಾರ, ಭ್ರೂಣ ಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿದ್ದರೂ ಆಳುವ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಡ್ರಾಪ್ ಕೊಡುವ ನೆಪದಲ್ಲಿ ಬೆಂಗಳೂರಿನಲ್ಲಿ ಅತ್ಯಾಚಾರಕ್ಕೆ ಯತ್ನ ಮಾಡಲಾಗಿದೆ. ಇಂತಹ ಘಟನೆಗಳು ಪ್ರತೀ ನಿಮಿಷಕ್ಕೊಂದು ನಡೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಕಠಿಣ ಕಾನೂನು ರೂಪಿಸುತ್ತಿಲ್ಲ. ಪ್ರತಿ ವರ್ಷವೂ ಸಹಸ್ರಾರು ಅತ್ಯಾಚಾರ ಪ್ರಕರಣ ನಡೆಯುತ್ತಿವೆ. ಆರೋಪಿಗಳನ್ನು ಬಂಧಿಸುತ್ತಾರೆಯೇ ಹೊರತು, ಮುಂದೆ ಅವರಿಗೆ ಕಾರಾಗೃಹ ಶಿಕ್ಷೆಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಮೋಚನಾ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕ ಜನಾರ್ದನ್ ಹೂತಗೆರೆ ಮಾತನಾಡಿ, ಅತ್ಯಾಚಾರದ ಘಟನೆಗಳು ದಾಖಲಾದಾಗ ವಿಳಂಬ ಧೋರಣೆಯನ್ನು ಬಿಟ್ಟು ತ್ವರಿತಗತಿಯಲ್ಲಿ ತನಿಖೆ ನಡೆಸಿ ಶೀಘ್ರವಾಗಿ ತೀರ್ಪುಗಳು ಬಂದು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಶಾಲಾ ಮತ್ತು ಕಾಲೇಜಿನ ಪಠ್ಯಕ್ರಮದ ಹಂತದಿಂದಲೇ ಸರಿ, ತಪ್ಪುಗಳ ಕುರಿತು ಲೈಂಗಿಕ ಶಿಕ್ಷಣವನ್ನು ಜಾರಿಗೆ ತರಬೇಕು. ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣ ಮಾಡುವುದರ ಜತೆಗೆ ಅವರ ಸುರಕ್ಷತೆ, ಭದ್ರತೆಗೆ ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಅಕ್ರಮ ಗರ್ಭಪಾತ ನಡೆಸಲು ಎಂಟಿಪಿ ಮೆಡಿಕಲ್ ಫಿಲ್ಸ್ ಮಾತ್ರೆಗಳ ಮಾರಾಟ ಕಾಳಸಂತೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟ ಮಾರಾಟದ ಮಾಹಿತಿ ನೀಡದೆ ಮೆಡಿಕಲ್ ಸ್ಟೋರ್ ಮತ್ತು ಡ್ರಗ್ ಏಜೆನ್ಸಿಗಳ ಬಗ್ಗೆ ತನಿಖೆ ನಡೆಸಿ ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ವರದಿ ಇದ್ದರೂ ಕ್ರಮ ಕೈಗೊಳ್ಲುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಕೂಡಲೇ ಸರಿಪಡಿಸಿಕೊಂಡು ಅಂತವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ವಿವಿಧ ಸಂಘಟನೆಯ ಸಿ.ಕುಮಾರಿ, ಲತಾ ಶಂಕರ್, ಇಂಪನಾ ಇತರರಿದ್ದರು.