ಶೂನ್ಯ ಬಂಡವಾಳ ಅಪಾರ ಲಾಭ: ಇಳಿವಯಸ್ಸಿನಲ್ಲಿಯೂ ಮದ್ದೂರು ರೈತನ ಮಾದರಿ ಬದುಕು

19_08_Mdr_01
Published on

ಮದ್ದೂರು: ಸಾಧನೆ ಮಾಡಬೇಕೆಂದುಕೊಂಡರೆ ವಯಸ್ಸು ಲೆಕ್ಕಕ್ಕಿಲ್ಲ. ಆದರೆ ಗುರಿ ಮುಟ್ಟುವವರೆಗೂ ತಾಳ್ಮೆ, ಬದ್ಧತೆ ಮುಖ್ಯ. ಈ ಪಾಸಿಟಿವ್ ಅಂಶಗಳನ್ನು ಮೈಗೂಡಿಸಿಕೊಂಡು ಸರ್ಕಾರಿ ಕೆಲಸಕ್ಕೆ ಗುಡ್‌ಬೈ ಹೇಳಿ ಕೃಷಿ ಆರಂಭಿಸಿದ ವ್ಯಕ್ತಿ ಇಂದು ಪ್ರಗತಿಪರ ರೈತರಾಗಿದ್ದಾರೆ. ಮಾತ್ರವಲ್ಲದೆ ಯುವಕರನ್ನು ನಾಚಿಸುವಂತೆ ಸಾಧಿಸಿ ತೋರಿಸಿದ್ದಾರೆ.

ವಯಸ್ಸು 70 ಆದರೂ ಕೃಷಿ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಸಾವಿರಾರೂ ಸಂಬಳ ಕೊಡುವ ವೃತ್ತಿಯನ್ನು ಬಿಟ್ಟು ಕೃಷಿಯತ್ತ ಮುಖ ಮಾಡಿದಾಗ ಸಾಕಷ್ಟು ವ್ಯಂಗ್ಯದ ಮಾತು ಕೇಳಿಬಂದಿದ್ದವು. ಆದರಿಂದು ಅವರ ಸಾಧನೆ ಕಂಡವರು ಚಪ್ಪಾಳೆ ತಟ್ಟುತ್ತಾರೆ. ಇದು ಮದ್ದೂರು ಪಟ್ಟಣದ ಹೊರವಲಯದಲ್ಲಿ ನೈಸರ್ಗಿಕ ಕೃಷಿ ಮಾಡುತ್ತಾ ವರ್ಷಕ್ಕೆ ಲಕ್ಷಾಂತರ ರೂ ಸಂಪಾದಿಸುತ್ತಿರುವ ಪ್ರಗತಿಪರ ಕೃಷಿಕ ಎಸ್.ಸುಂದರ್ ಅವರ ಜೀವನದ ಯಶೋಗಾಥೆ.

ಇಳಿ ವಯಸ್ಸಿನಲ್ಲೂ ಯುವಕರು ನಾಚಿಸುವಂತೆ ಸುಮಾರು 2.5 ಎಕರೆ ಜಮೀನಿನಲ್ಲಿ ನೈಸರ್ಗಿಕ ಮರ ಆಧಾರಿತ ತೋಟಗಾರಿಕಾ ಕೃಷಿಯನ್ನು ಕೈಗೊಂಡು ವರ್ಷಕ್ಕೆ 6 ಲಕ್ಷ ರೂಗೂ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ. ಯಾವ ವಸ್ತುವನ್ನೂ ಹೊರ ಹಾಕದೆ, ಹೊರಗಿನಿಂದಲೂ ವಸ್ತುಗಳನ್ನು ಖರೀದಿಸಿ ಹೂಡಿಕೆ ಮಾಡದೆ ಶೂನ್ಯ ಬಂಡವಾಳ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರುವುದು ವಿಶೇಷವಾಗಿದೆ.

ಸರ್ಕಾರಿ ಕೆಲಸಕ್ಕೆ ಸ್ವಯಂ ನಿವೃತ್ತಿ: ಸುಂದರ್ ಅವರು ಬೆಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಎಲೆಕ್ಟ್ರಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಅದ್ಯಾಕೋ ವೃತ್ತಿಯನ್ನು ತೊರೆಯುವ ನಿರ್ಧಾರ ಮಾಡಿದರು. ಇದಕ್ಕೆ ಬೇಸಾಯದ ಮೇಲಿನ ಅದಮ್ಯ ಪ್ರೀತಿಯೂ ಕಾರಣ. ಗಟ್ಟಿ ನಿರ್ಧಾರದೊಂದಿಗೆ 14 ವರ್ಷಕ್ಕೂ ಮುಂಚೆಯೇ ಸ್ವಯಂ ನಿವೃತ್ತಿ ಪಡೆದರು. ಬಳಿಕ ಪಟ್ಟಣದ ಹೊರವಲಯದಲ್ಲಿರುವ 2.5 ಎಕರೆ ಜಮೀನಿನಲ್ಲಿ ಕೃಷಿ ಮಾಡಲು ಪ್ರಾರಂಭಿಸುತ್ತಾರೆ. ಸುಂದರ್ ಅಂದುಕೊಂಡಂತೆ ಪ್ರಾರಂಭದ ದಿನಗಳು ಸುಲಭವಾಗಿರಲಿಲ್ಲ. ಬದಲಿಗೆ ಹಲವು ಅಡೆತಡೆ ಎದುರಾದವು. ಆದರೂ ಅದನ್ನೆಲ್ಲ ಮೆಟ್ಟಿ ನಿಂತು ಕೃಷಿಯಲ್ಲಿ ಸಾಧಿಸಿ ತೋರಿಸಿದ್ದಾರೆ.

ಸುಮಾರು 35 ವರ್ಷದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸುಂದರ್ ಅವರಿಗೆ ಬೇಸಾಯದ ಮೇಲಿರುವ ಪ್ರೀತಿಯನ್ನು ಕಡಿಮೆಯಾಗಿಲ್ಲ. ತಮ್ಮ ಜಮೀನಿನಲ್ಲಿ ಹಲಸು, ಮಾವು, ಬೆಣ್ಣೆ ಹಣ್ಣು ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಎಲ್ಲವೂ ಸಮೃದ್ದವಾಗಿವೆ. ವಾಣಿಜ್ಯೋದ್ದೇಶದಿಂದ ಕಾಳು ಮೆಣಸು, ಕಾಫಿ ಹಾಗೂ ಕೋ-ಕೋ ಬೆಳೆಗಳನ್ನು ಬೆಳೆದಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಹಚ್ಚ ಹಸಿರು ಹೊದಿಕೆ ಹಾಗೂ ಬೇಸಿಗೆಯಲ್ಲಿ ಬುಡದಿಂದ ಮೇಲಕ್ಕೆ ಕತ್ತರಿಸಿದ ಕಳೆಗಳ ಒಣ ಹೊದಿಕೆಗಳ ಸಹಾಯದಿಂದ ನೀರು ಹಾಗೂ ಸಾವಯವ ಇಂಗಾಲ, ಸೂಕ್ಷ್ಮಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡಿರುತ್ತಾರೆ.

ಮನೆಯ ಬಳಿ ಸುಸಜ್ಜಿತವಾದ ತೆಂಗು ಹಾಗೂ ಅಡಿಕೆಯ ನರ್ಸರಿ ಮಾಡಿದ್ದಾರೆ. ತಾಲೂಕು ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ವಾರ್ಷಿಕವಾಗಿ ಸುಮಾರು 5 ರಿಂದ 6 ಸಾವಿರ ಅಡಿಕೆ ಗಿಡ ಮತ್ತು 2 ಸಾವಿರದಷ್ಟು ತೆಂಗಿನ ಸಸಿಗಳನ್ನು ಮಾರಾಟ ಮಾಡುತ್ತಾರೆ. ಇನ್ನು ಇವರು ಬೇಸಾಯಕ್ಕೆ ಯಾವುದೇ ರೀತಿಯ ರಾಸಾಯನಿಕ ವಸ್ತುಗಳನ್ನ ಬಳಸುವುದಿಲ್ಲ. ಬದಲಿಗೆ ಜಮೀನಿನಲ್ಲಿ ಸಿಗುವ ತೆಂಗಿನ ಹಾಗೂ ಅಡಿಕೆಯ ಗರಿಗಳನ್ನ ಒಣಗಿಸಿ ಅದನ್ನೇ ಬಳಸುತ್ತಾರೆ(ಒಣ ಹೊದಿಕೆ) ಹಾಗೂ ಹಸಿರು ಕಳೆಗಳನ್ನು(ಹಸಿರು ಹೊದಿಕೆ) ಬಳಸುತ್ತಾರೆ. ಜಮೀನಿನಲ್ಲಿ ಸುಖಾಸುಮ್ಮನೆ ಅಗೆಯುವುದು, ಉಳುವುದು, ಸುಡುವುದು ಮಾಡುವುದಿಲ್ಲ. ಇವರ ತೋಟ ಸಂಪೂರ್ಣ ಪ್ಲಾಸ್ಟಿಕ್ ರಹಿತವಾಗಿ ಪರಿಸರ ಸ್ನೇಹಿಯಾಗಿರುವುದು ಅತ್ಯಂತ ಗಮನಾರ್ಹ. ಇವರ ಬೆಳೆಗಳು ಮಳೆ ಆಶ್ರಿತವಾಗಿದ್ದು, ಬೋರ್‌ವೆಲ್‌ಗಳನ್ನು ಕೊರೆಸಿಲ್ಲ ಎನ್ನುವುದು ವಿಶೇಷ.

ಸುಂದರ್ ಅವರ ಬೇಸಾಯದ ಕ್ರಮವನ್ನು ನೋಡಲು ಮತ್ತು ಅಳವಡಿಸಿಕೊಳ್ಳಲು ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ರೈತರು ತೋಟಕ್ಕೆ ಆಗಮಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇವರ ಬೇಸಾಯದ ಸಾಧನೆಗೆ ಕೃಷಿ ಇಲಾಖೆಯ ಆತ್ಮ ಯೋಜನೆಯಡಿಯಲ್ಲಿ ಪ್ರಗತಿಪರ ರೈತ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. ಮಾತ್ರವಲ್ಲದೆ ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net