ರೈತರ ಜಮೀನಿಗೆ ಪರಿಹಾರ ನೀಡಲು ಆಗ್ರಹ

WhatsApp Image 2025-10-29 at 9.08.59 PM
Published on

ಬೆಳಗಾವಿ: ತಾಲೂಕಿನ ಬಸುರ್ತೆ ಮತ್ತು ಅತಿವಾಡ ಗ್ರಾಮಗಳಲ್ಲಿ ಡ್ಯಾಮ್ ನಿರ್ಮಾಣಕ್ಕೆ ರೈತರಿಂದ ಜಮೀನು ಪಡೆದು, ಸೂಕ್ತ ಪರಿಹಾರ ಕೊಡದೆ ಸರ್ಕಾರ ಸತಾಯಿಸುತ್ತಿದ್ದು, ಆದಷ್ಟು ಬೇಗ ಪರಿಹಾರ ಕೊಡಬೇಕು. ಇಲ್ಲದೆ ಹೋದಲ್ಲಿ ಕಾನೂನಾತ್ಮಕ ಸೇರಿದಂತೆ ಎಲ್ಲ ರೀತಿಯ ಹೋರಾಟ ಆರಂಭಿಸಲಾಗುವುದು ಎಂದು ಹಸಿರು ಸೇನೆ ಮತ್ತು ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸುರೇಶ ಪರಗಣ್ಣವರ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವಾಡ ಗ್ರಾಮದಲ್ಲಿ ಚಿಕ್ಕ ಡ್ಯಾಮ್ ನಿರ್ಮಾಣಕ್ಕಾಗಿ 48 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದಾರೆ. ಈಗಾಗಲೇ ಕಾಮಗಾರಿ ಸಹ ಆಗಿದೆ. ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಪರಿಹಾರ ಬಾಕಿ ಜಮೆಯಾಗಿಲ್ಲ. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಸುರ್ತೆ ಗ್ರಾಮದಲ್ಲಿ ಮತ್ತೊಂದು ಡ್ಯಾಮ್ ನಿರ್ಮಾಣಕ್ಕೆ 70 ಎಕರೆ ಜಮೀನು ಗುರುತಿಸಿ, ಸ್ವಾಧೀನ ಪ್ರಕ್ರಿಯೆಯನ್ನೂ ಮಾಡದೇ ನೇರವಾಗಿ ಕಾಮಗಾರಿ ಆರಂಭಿಸಿದ್ದಾರೆ. ಈಗಾಗಲೇ ಸರ್ಕಾರ ನಿಗದಿಪಡಿಸಿದ ದರಕ್ಕೆ ರೈತರ ವಿರೋಧವಿದ್ದು, ಭೂಮಿ ಕೊಡಲು ಒಪ್ಪಿಲ್ಲವಾದರೂ ಕಾನೂನುಬಾಹಿರವಾಗಿ ಸರ್ಕಾರದಿಂದ ಕಾಮಗಾರಿ ಆರಂಭಿಸಿದ್ದಾರೆ ಎಂದು ಆರೋಪಿಸಿದರು.

ರೈತರ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಈ ಸಲದ ಕಬ್ಬಿಗೆ ಸೂಕ್ತ ದರ ನಿಗದಿಗೆ ಸಂಬಂಧಿಸಿದಂತೆ ಗುರುವಾರ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಿದ್ದೇವೆ. ಪ್ರತಿಭಟನೆ ಬಳಿಕ, ರೈತರ ಜಮೀನಿಗೆ ಪರಿಹಾರ ಬಾರದಿದ್ದಲ್ಲಿ ಕಾನೂನಾತ್ಮಕ ಹೋರಾಟಕ್ಕೂ ರೈತರು ಮುಂದಾಗಲಿದ್ದಾರೆ ಎಂದು ತಿಳಿಸಿದರು.

ಗೌರವಾಧ್ಯಕ್ಷ ರಾಘವೇಂದ್ರ ನಾಯಕ, ಅಡಿವೆಪ್ಪ ಕಮತಗಿ, ನೇತಾಜಿ ಬೆನಕೆ, ಮಹಾವೀರ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net