

ಮಡಿಕೇರಿ:
ಬಹುತೇಕ ಸಣ್ಣ ಹಿಡುವಳಿದಾರರೇ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಸಿ ಆ್ಯಂಡ್ ಡಿ(ಕೃಷಿಗೆ ಯೋಗ್ಯವಲ್ಲದ ಭೂಮಿ) ಜಾಗವನ್ನು ಡೀಮ್ಡ್ ಫಾರೆಸ್ಟ್ ಕಾಯ್ದೆ ಮೂಲಕ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿರುವುದು ಜಿಲ್ಲೆಯ ರೈತರ ನಿದ್ದೆಗೆಡಿಸಿದೆ.
ಕೂರ್ಗ್ ಲ್ಯಾಂಡ್ ರೆಜ್ಯುಲೇಶನ್ 1889ರ ಕಾಯ್ದೆ ಪೂರ್ವದಲ್ಲಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ರೈತರಿಗೆ ಹಿಡುವಳಿ ಜಮೀನು ಕೊಡಲಾಗಿತ್ತು. ಉಳಿದಂತೆ ದಟ್ಟವಾದ ಅರಣ್ಯ, ಕಾಡು, ಬೆಟ್ಟಗುಡ್ಡ ಪ್ರದೇಶಗಳನ್ನು ಅರಣ್ಯ ಜಮೀನು ಎಂದೂ, ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಸರ್ಕಾರದ ಪೈಸಾರಿ ಜಮೀನೆಂದು ಗುರುತಿಸಲಾಗಿತ್ತು.
1978ರಲ್ಲಿ ಸರ್ಕಾರದ ಅದೇಶದಂತೆ ಸರ್ಕಾರದ ಹೆಸರಿನಲ್ಲಿ ದಾಖಲಾಗಿರುವ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯನ್ನು ಸಿ ಆ್ಯಂಡ್ ಡಿ ಭೂಮಿಯೆಂದು ವರ್ಗೀಕರಿಸಿ ಅಂತಹ ಜಮೀನುಗಳನ್ನು ಮಾತ್ರ ಅರಣ್ಯ ಇಲಾಖೆಗೆ ಹಸ್ತಾಂತರಿಸುವAತೆ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಆದರೆ ಆಗಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರದ ಹೆಸರಿನಲ್ಲಿ ಇರುವ ಎಲ್ಲಾ ಪೈಸಾರಿ ಜಮೀನುಗಳನ್ನು ಸ್ಥಳ ತನಿಖೆ ಮಾಡದೇ ಪಟ್ಟಿಮಾಡಿ ಸಿ ಆ್ಯಂಡ್ ಡಿ ಜಮೀನುಗಳೆಂದು ಸರ್ಕಾರಕ್ಕೆ ಕೊಟ್ಟಿದ್ದ ವರದಿಯಿಂದ ಈಗ ಸಮಸ್ಯೆ ಉದ್ಭವಿಸಿದೆ.
ಕೊಡಗಿನಲ್ಲಿ ಬಹುತೇಕ ಸಣ್ಣ ರೈತರು ಸಿ ಆ್ಯಂಡ್ ಡಿ ಭೂಮಿಯಲ್ಲೇ ಕಾಫಿ, ಕಾಳುಮೆಣಸು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅದರಲ್ಲೂ ಸೋಮವಾರಪೇಟೆ ತಾಲೂಕಿನಲ್ಲಿ ಶೇ. 70ಕ್ಕೂ ಅಧಿಕ ರೈತರು 2-5 ಎಕರೆ ತನಕದ ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಸಿ ಆ್ಯಂಡ್ ಡಿ ವರ್ಗೀಕರಣದ ಅಡಿಯ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಪ್ರದೇಶ, ತೋಟ-ಗದ್ದೆಗಳಿರುವ ಜಾಗಗಳಿಗೂ ಇದು ಅನ್ವಯ ಆಗುವುದರಿಂದ ಸಮಸ್ಯೆ ಗಂಭೀರತೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ (ಆ.12) ಸೋಮವಾರಪೇಟೆ ತಾಲೂಕು ಬಂದ್ ಕೂಡ ಕರೆಯಲಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ರೈತರ ಹಿತ ಕಾಪಾಡುವುದು ಜನಪ್ರತಿನಿಧಿಗಳ ಜವಾಬ್ದಾರಿ. ಸಿ ಆಂ್ಯಡ್ ಡಿ ಜಾಗ ಸಮಸ್ಯೆ ಬಗೆಹರಿಸುವ ನನ್ನ ಪ್ರಯತ್ನ ನಿರಂತರವಾಗಿದೆ. ಈಗಾಗಲೇ ರೈತ ಮುಖಂಡರ ನಿಯೋಗದೊಂದಿಗೆ ಕಂದಾಯ, ಅರಣ್ಯ, ಜಿಲ್ಲಾ ಉಸ್ತುವಾರಿ ಸೇರಿದಂತೆ ಇನ್ನೂ ಅನೇಕ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಹಿಂದಿನ ಬೆಳಗಾವಿ ಅಧಿವೇಶದಲ್ಲಿ ಚರ್ಚೆ ಮಾಡಿದ್ದೇವೆ. ಈಗಿನ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇವೆ. ಉನ್ನತ ಮಟ್ಟದ ಸಮಿತಿ ರಚನೆ ಆಗಲೇಬೇಕು. ಸಿ ಆ್ಯಂಡ್ ಡಿ ಕೃಷಿ ಭೂಮಿ ರೈತರಿಗೆ ಸೇರಬೇಕು. ರೈತರು ಆತಂಕ ಪಡಬಾರದು. ರಾಜಕೀಯ ರಹಿತವಾಗಿ ಹೋರಾಟ ಮಾಡೋಣ.
ಡಾ. ಮಂತರ್‌ಗೌಡ, ಮಡಿಕೇರಿ ಶಾಸಕ
ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಸಿ ಆ್ಯಂಡ್ ಡಿ ಭೂಮಿಯಲ್ಲೇ ರೈತರು ಕೃಷಿ ಮಾಡಿಕೊಂಡಿದ್ದಾರೆ. ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇದುವರೆಗೆ ಹಕ್ಕುಪತ್ರಗಳು ಸಿಕ್ಕಿಲ್ಲ. ರೈತರು ಕೃಷಿ ಮಾಡಿ ಕುಟುಂಬ ಸಾಕಬೇಕು. ಕಳೆದ ಇಪ್ಪತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಮಾನವೀಯ ದೃಷ್ಟಿಯಿಂದಲಾದರೂ ಹಕ್ಕುಪತ್ರ ಕೊಡಬೇಕು.
ಕೆ.ಎಂ. ಲೋಕೇಶ್, ಅಧ್ಯಕ್ಷ, ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ, ಶಾಂತಳ್ಳಿ
ಕಂದಾಯ, ಅರಣ್ಯ ಸಚಿವರುಗಳು, ಸಂಸದರು ಸೇರಿದಂತೆ ಅನೇಕ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಿ ಆ್ಯಂಡ್ ಡಿ ಸಮಸ್ಯೆಯ ಗಂಭೀರತೆಯ ಬಗ್ಗೆ ವಿವರಿಸಲಾಗಿದೆ. ಅದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆಯಿಂದ ರೈತರಿಗೆ ಕಿರುಕುಳ ಪ್ರಾರಂಭವಾಗಿದೆ. ರೈತರು ಹೋರಾಟ ಮಾಡಲೇಬೇಕಾದ ಅನಿವಾರ್ಯತೆಯಿದೆ. ಆ.12ರ ಬಂದ್ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಪ್ರಾರಂಭಿಸಲಾಗುವುದು.
ಕೆ.ಬಿ. ಸುರೇಶ್, ಅಧ್ಯಕ್ಷ, ರೈತ ಹೋರಾಟ ಸಮಿತಿ, ಸೋಮವಾರಪೇಟೆ
ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗೆ ಕೊಡಗು ಜಿಲ್ಲೆಯಲ್ಲಿ ಅರಣ್ಯ ಭೂಮಿ ಎಷ್ಟಿದೆ, ಅದರಲ್ಲಿ ಸಿ ಆ್ಯಂಡ್ ಡಿ ಮತ್ತು ಪೈಸಾರಿ ಭೂಮಿ ಎಷ್ಟಿದೆ? ಎಲ್ಲಿದೆ? ಎಂಬುದು ಗೊತ್ತಿಲ್ಲ. ಅರಣ್ಯ ಇಲಾಖೆಯಿಂದ ಸೆಕ್ಷನ್-4 ಸರ್ವೇಗೆ ರೈತರಿಗೆ ನೋಟಿಸ್ ಬರುತ್ತಿದೆ. ಮೊದಲು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ರೈತರಿಗೆ ಮಾಹಿತಿ ನೀಡಬೇಕು. ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡರೆ ರೈತರು ಎಲ್ಲಿಗೆ ಹೋಗಬೇಕು.
ಕೆ.ಎಂ. ದಿನೇಶ್, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ, ಸೋಮವಾರಪೇಟೆ
ರೈತರ ಸಿ ಮತ್ತು ಡಿ ಮಾದರಿ ಜಾಗಗಳನ್ನ ಅರಣ್ಯ ಇಲಾಖೆ ಮೂಲಕ ವಶಪಡಿಸಿಕೊಳ್ಳಲು ಮುಂದಾಗಿರುವುದು ದುರಂತ. ಇದರಿಂದ ಸಣ್ಣ ಹಿಡುವಳಿದಾರರ ಬದುಕು ಬೀದಿಗೆ ಬರಲಿದೆ. ಅನೇಕರಿಗೆ ಈ ಜಾಗ ಬಿಟ್ಟರೆ ಬೇರೆ ಜಾಗ ಇರುವುದಿಲ್ಲ. ಅರಣ್ಯ ಇಲಾಖೆಗೆ ವರ್ಗಾವಣೆ ಆದರೆ ಮನೆ ಮಠ ಕಳೆದುಕೊಳ್ಳಬೇಕಾಗುತ್ತದೆ.
ಸುಧಾ ಈರೇಶ್, ಅಧ್ಯಕ್ಷೆ, ಗ್ರಾಮ ಪಂಚಾಯತ್, ಹಂಡ್ಲಿ
ಸಿ ಮತ್ತು ಡಿ ಮಾದರಿ ಜಾಗವನ್ನು ಅರಣ್ಯ ಇಲಾಖೆಯ ಮೂಲಕ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಬಡವರೇ ಹೆಚ್ಚು ಇಂಥ ಜಗದಲ್ಲಿ ಮನೆ ಕಟ್ಟಿಕೊಂಡು ಒಂದಷ್ಟು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದು ಬಿಟ್ಟರೆ ಬೇರೆ ಯಾವುದೇ ಆದಾಯ ಮೂಲ ಇವರಿಗೆ ಇರುವುದಿಲ್ಲ. ಇದೀಗ ಇದನ್ನು ಕಿತ್ತುಕೊಳ್ಳಲು ಮುಂದಾಗಿರುವುದು ಎಷ್ಟು ಸರಿ ? ಈ ರೀತಿ ಆದರೆ ಬಡವರು ಬೀದಿಗೆ ಬರಬೇಕಾಗುತ್ತದೆ.
ಪೂರ್ಣಿಮಾ ಕಿರಣ್, ಸದಸ್ಯೆ, ಗ್ರಾಮ ಪಂಚಾಯತ್, ದುಂಡಳ್ಳಿ
ಸಿ ಮತ್ತು ಡಿ ಭೂಮಿ ಎಂಬ ಪದದ ಅರ್ಥ ಕೃಷಿಗೆ ಯೋಗ್ಯವಲ್ಲದ ಜಮೀನು ಎಂಬುದಾಗಿ. ಆದರೆ ಕೊಡಗಿನಲ್ಲಿ ಶೇ. 70 ರಷ್ಟು ರೈತರು ಮತ್ತು ಕೃಷಿ ವರ್ಗದ ಜನರು ಮಧ್ಯಮ ಮತ್ತು ಸಣ್ಣ ಹಿಡುವಳಿದಾರರಾಗಿರುತ್ತಾರೆ. ಕೊಡಗಿನಲ್ಲಿ ಕೃಷಿಗೆ ಯೋಗ್ಯವಲ್ಲದ ಜಮೀನು ತೀರ ವಿರಳ. ಇಂತಹ ಸಂದರ್ಭದಲ್ಲಿ ಸÀರ್ಕಾರ ಯಾವುದೇ ಇರಲಿ ನಾವು ಚುನಾಯಿಸಿದ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಬಡ ವರ್ಗದ ಜನರ ಪರವಾಗಿ ನಿಂತು ಕಾನೂನಾತ್ಮಕವಾಗಿ ಹೋರಾಡಬೇಕಾಗಿದೆ. ಸಾಧ್ಯವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರೇ ಸರ್ಕಾರಗಳ ವಿರುದ್ಧ ದಂಗೆ ಏಳುವ ಪರಿಸ್ಧಿತಿ ಉಧ್ಬವವಾಗಬಹುದು.
ಹುಲಿ ಮನೆ ದಿಲೀಪ್ ಕುಮಾರ್, ಮದೆನಾಡು ಗ್ರಾಮ
ಕೊಡಗು ಜಿಲ್ಲೆಯಲ್ಲಿ ಸಾವಿರಾರು ಎಕರೆಯಷ್ಟು ಭೂಮಿಯನ್ನು ಸಿ ಮತ್ತು ಡಿ ಹೆಸರಿನಲ್ಲಿ ರೈತರು ಕಳೆದುಕೊಳ್ಳಬೇಕಾಗಿದೆ. ರೈತರು ಅನೇಕ ದಶಕಗಳ ಹಿಂದಿನಿAದಲೂ ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಅನೇಕ ವರ್ಷಗಳಿಂದ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿಕೊಂಡು ಹಕ್ಕುಪತ್ರಕ್ಕಾಗಿ ಪರದಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಕೃಷಿ ಭೂಮಿಯನ್ನು ಸಿ ಮತ್ತು ಡಿ ಭೂಮಿಯೆಂದು ಸರ್ವೇಗೆ ಮುಂದಾಗಿರುವುದು ಖಂಡನೀಯ.
ಇಟ್ಟಿರ ಮುನ್ನ ಗಣಪತಿ, ಮಾಲ್ದಾರೆ
ಸಿ ಮತ್ತು ಡಿ ಜಾಗದ ಬಗ್ಗೆ ಜನರಲ್ಲಿ ಇನ್ನೂ ಸಾಕಷ್ಟು ಗೊಂದಲಗಳಿವೆ. ಮೊದಲು ಅದನ್ನು ಸರಿಪಡಿಸಬೇಕು. ಅದೂ ಅಲ್ಲದೆ ಅದೆಷ್ಟೋ ವರ್ಷಗಳಿಂದ ಸಣ್ಣ ರೈತರು ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಏಕಾಏಕಿ ಅವರನ್ನ ಅಲ್ಲಿಂದ ತೆರವುಗೊಳಿಸಿದರೆ ಅವರ ಗತಿ ಏನಾಗಬೇಕು? ಸರ್ಕಾರ ಈ ಬಗ್ಗೆ ಯೋಚಿಸಿ ಬಡವರ ಬದುಕು ಬರಡಾಗದ ರೀತಿ ಕ್ರಮ ಕೈಗೊಳ್ಳಬೇಕು.
ಎನ್.ಜಿ. ಸುರೇಶ್, ವಿದ್ಯುತ್ ಗುತ್ತಿಗೆದಾರ, ಗೋಣಿಕೊಪ್ಪಲು