

ಮಡಿಕೇರಿ:
ಸಿ ಆ್ಯಂಡ್ ಡಿ ಮತ್ತು ರೈತರ ಇನ್ನಿತರ ಸಮಸ್ಯೆಗಳ ಬಗ್ಗೆ ರೈತ ಹೋರಾಟ ಸಮಿತಿ ಹಾಗೂ ಜಿಲ್ಲಾ ರೈತ ಸಂಘ ಶುಕ್ರವಾರ (ಡಿ.20) ಹಮ್ಮಿಕೊಂಡಿರುವ ಜಾಥಾ ಮತ್ತು ಹೋರಾಟವನ್ನು ಬೆಂಬಲಿಸುವುದಾಗಿ ಭಾಗಮಂಡಲ, ಸಂಪಾಜೆ ಹೋಬಳಿ ರೈತ ಹಿತರಕ್ಷಣಾ ಸಮಿತಿ ಪ್ರಕಟಿಸಿದೆ.
ಶಾಲೆಯ ಆಟದ ಮೈದಾನವನ್ನೂ ಬಿಡದಂತೆ ರೈತರ ಜಮೀನು, ಸಿ ಆ್ಯಂಡ್ ಡಿ ಭೂಮಿ ಹೆಸರಿನಲ್ಲಿ ಸರ್ಕಾರಕ್ಕೆ ಹಸ್ತಾಂತರ ಆಗುತ್ತಿದೆ. ಈ ಬಗ್ಗೆ ಕೊಡಗಿನ ಇಬ್ಬರು ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿದರೂ ಸಚಿವರು ಮತ್ತು ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಭಾಗಮಂಡಲ, ಸಂಪಾಜೆ ಹೋಬಳಿ ರೈತ ಹಿತರಕ್ಷಣಾ ಸಮಿತಿ ಸಂಚಾಲಕ ಬೋಪಣ್ಣ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇದು ಕೆಲವು ರೈತರ ಸಮಸ್ಯೆ ಅಲ್ಲ. ಕೊಡಗಿನ ಎಲ್ಲಾ ರೈತರ ಸಮಸ್ಯೆ. ಡೀಮ್ಡ್ ಫಾರೆಸ್ಟ್ನ್ಲಲೂ ಸ್ಪಷ್ಟತೆ ಇಲ್ಲ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ರೈತರ ಹಿತ ದೃಷ್ಟಿಯಿಂದ ಶುಕ್ರವಾರದ ಹೋರಾಟದಲ್ಲಿ ಎಲ್ಲಾ ರೈತರು ಭಾಗವಹಿಸಬೇಕು. ಭಾಗಮಂಡಲ, ಸಂಪಾಜೆ ವ್ಯಾಪ್ತಿಯಿಂದ ದೊಡ್ಡ ಸಂಖ್ಯೆಯಲ್ಲಿ ರೈತರು ಇದರಲ್ಲಿ ಭಾಗಿ ಆಗುತ್ತಿದ್ದಾರೆ ಎಂದರು..
ಭಾಗಮಂಡಲ, ಸಂಪಾಜೆ ಹೋಬಳಿ ರೈತ ಹಿತರಕ್ಷಣಾ ಸಮಿತಿ ಪ್ರಮುಖರಾದ ಗಿರೀಶ್ ಹೊಸೂರು, ಕೊಪ್ಪಡ ಪಳಂಗಪ್ಪ, ನವೀನ್ ಬಿದ್ದಪ್ಪ ಹಾಗೂ ರವಿ ಬೆಳ್ಯನ ಸುದ್ದಿಗೋಷ್ಠಿಯಲ್ಲಿ ಇದ್ದರು.