ಕಾಯ್ದೆ ಕೈಬಿಡಿ, ಇಲ್ಲ ಜೈಲಿಗೆ ಹಾಕಿ ; ಜೈಲ್ ಭರೋ ಚಳವಳಿ ಮೂಲಕ ರೈತ ಸಂಘ ಪಟ್ಟು

19-klr-1
Published on

ಕೋಲಾರ: ರೈತರು ಮತ್ತು ಕಾರ್ಮಿಕರಿಗೆ ಮಾರಕವಾಗುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ವಿದ್ಯುತ್, ಕಾರ್ಮಿಕ ಕಾಯ್ದೆಗಳನ್ನು ಅಧಿವೇಶನದಲ್ಲಿ ಅಂಗೀಕರಿಸಬಾರದು ಎಂದು ರೈತ ಸಂಘದಿಂದ ಶನಿವಾರ ಜೈಲ್‌ ಭರೋ ಚಳವಳಿ ನಡೆಸಲಾಯಿತು.

ತರಕಾರಿ, ಸೊಪ್ಪು ಮತ್ತು ಕೋಳಿಗಳೊಂದಿಗೆ ನಗರದ ಕೋಲಾರಮ್ಮ ದೇವಸ್ಥಾನದಿಂದ ಜಿಲ್ಲಾ ಕಾರಾಗೃಹದವರೆಗೆ ಜೈಲ್ ಭರೋ ಚಳವಳಿ ನಡೆಸಿ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಿ, ಇಲ್ಲವಾದರೆ ನಮ್ಮನ್ನು ಜೈಲಿಗೆ ಹಾಕಿ ಎಂಬ ಘೋಷಣೆ ಕೂಗಿದರು.

ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದೆ. ಸುಗ್ರೀವಾಜ್ಞೆಯಿಂದ ಕೃಷಿ ಜಮೀನಿನ ಮೇಲೆ ಕಪ್ಪು ಹಣ ಹೂಡಿಕೆಯಾಗಲಿದೆ. ರೈತರ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ, ಕಾರ್ಮಿಕರ ನೆಪದಲ್ಲಿ ಕೈಗಾರಿಕೋದ್ಯಮಗಳಿಗೆ ಸರ್ಕಾರ ಪರೋಕ್ಷವಾಗಿ ಸಹಾಯ ಮಾಡುತ್ತಿದೆ ಎಂದು ಟೀಕಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಗೆ ಬರುವಂತಾಗಿದ್ದು, ರಾಜ್ಯದಲ್ಲಿ ಶೇ.80 ಸಣ್ಣ ರೈತರು ಮೊದಲ ಹಂತದಲ್ಲಿ ಕೃಷಿ ಕ್ಷೇತ್ರದಿಂದ ಕಣ್ಮರೆಯಾಗುತ್ತಾರೆ. ರೈತರ ಭೂಮಿಯನ್ನು ಕರಾರು ಪತ್ರಗಳ ಮೂಲಕ ಕಾರ್ಪೋರೇಟ್ ಕಂಪನಿಗಳು ಒತ್ತೆ ಇಟ್ಟುಕೊಳ್ಳುತ್ತವೆ. ರೈತರು ಗೇಣಿದಾರರಾಗಿ ಕೃಷಿಯಿಂದ ವಿಮುಕ್ತಿಗೊಳಿಸುವ ಹುನ್ನಾರ ಸರ್ಕಾರದ್ದಾಗಿದೆ ಎಂದು ಆಪಾದಿಸಿದರು.

ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಬಡ ಜನರಿಗೆ ಬೆಳಕು ಸಿಗಲಿ ಎಂದು ಭಾಗ್ಯಜ್ಯೋತಿ ಕುಟೀರ ಜ್ಯೋತಿ ಎಂದು ಯೋಜನೆ ತರಲಾಗಿತ್ತು. ಈ ಯೋಜನೆಗಳು ಇನ್ನು ಇರುವುದಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ನಿಲ್ಲಲಿದೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ರೈತರ ಒಪ್ಪಿಗೆ ಇಲ್ಲದೆ ಕೃಷಿ ಭೂಮಿ ಕಿತ್ತುಕೊಳ್ಳುವ ಅಪಾಯವಿದೆ. ಹಾಗಾಗಿ ರೈತವಿರೋಧಿ ಭೂಸುಧಾರಣಾ, ಎಪಿಎಂಸಿ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಅಂಗೀಕರಿಸಬಾರದು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮುಖಂಡರಾದ ವರಮಹಾಲಕ್ಷ್ಮೀ, ತೆರ‌್ನಹಳ್ಳಿ ಆಂಜಿನಪ್ಪ, ಲೋಕೇಶ್, ಮಾಸ್ತಿವೆಂಕಟೇಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಸಹದೇವಣ್ಣ, ಮೀಸೆ ವೆಂಕಟೇಶಪ್ಪ, ರಂಜಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net