ವೈಜ್ಞಾನಿಕವಾಗಿ ಕೃಷಿ ಮಾಡಿ

30 08 2025_BGR_RURAL-PAGE_03
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಗೊಲ್ಲಹಳ್ಳಿಯಲ್ಲಿ ಅಡಿಕೆಯಲ್ಲಿ ಎಲೆ ಚುಕ್ಕೆ ಮತ್ತು ಸುಳಿ ತಿಗಣೆ ನಿರ್ವಹಣೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.
Published on

ತೂಬಗೆರೆ : ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರೆಯುವ ತಾಂತ್ರಿಕ ಮಾಹಿತಿ ಬಳಸಿಕೊಂಡು ರೈತರು ವೈಜ್ಞಾನಿಕವಾಗಿ ಕೃಷಿ ಮಾಡಬೇಕು ಎಂದು ಕೇಂದ್ರದ ಜೇನು ಕೃಷಿ ವಿಜ್ಞಾನಿ ಡಾ.ಜಿ.ಈಶ್ವರಪ್ಪ ಹೇಳಿದರು. ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಗೊಲ್ಲಹಳ್ಳಿಯಲ್ಲಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಆಯೋಜಿಸಿದ್ದ ಅಡಿಕೆಯಲ್ಲಿ ಎಲೆ ಚುಕ್ಕೆ ಮತ್ತು ಸುಳಿ ತಿಗಣೆ ನಿರ್ವಹಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದ ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದರು.

ಇತ್ತೀಚೆಗೆ ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಹೊಸದಾಗಿ ನಾಟಿ ಮಾಡಿರುವ ಅಡಿಕೆ ತೋಟಗಳಲ್ಲಿ ಸುಳಿ, ತಿಗಣೆ ಬಾಧೆ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ. ಈ ಕೀಟವು ಬೆಳೆಯುತ್ತಿರುವ ಅಡಿಕೆ ಸುಳಿಯ ಸಂದಿಗಳಲ್ಲಿ ಸೇರಿಕೊಂಡು ರಸವನ್ನು ಹೀರುವುದರಿಂದ ಎಳೆಯ ಗರಿಗಳ ಮೇಲೆ ಗಾಢ ಕಂದು ಬಣ್ಣದ ಗೆರೆಗಳು ಕಂಡು ಬರುತ್ತವೆ. ಇದರಿಂದ ಅಡಿಕೆ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತವೆ. ಇದರ ನಿರ್ವಹಣೆಗಾಗಿ ಥಯಾಮೇಥಾಕ್ಸಮ್​ 25 ತಿರ ಯನ್ನು 25 ಗ್ರಾಂ ಹರಳುಗಳನ್ನು 100 ಲೀ. ನೀರಿನೊಂದಿಗೆ (0.25 ಗ್ರಾಂ/ ಲೀ. ನೀರಿಗೆ) ಬೆರೆಸಿ ಸುಳಿಯ ಸಂದುಗಳಿಗೆ ತಾಕುವಂತೆ ಸಿಂಪಡಿಸಿ ಹಾಗೂ 20 ದಿನಗಳ ನಂತರ ಅರಡಿರಾಕ್ಟಿನ್​ (ಬೇವಿನ ಎಣ್ಣೆ) 10000 ಪಿಪಿಎಂ ಯನ್ನು 2 ಮಿಲಿ/ಲೀ. ನೀರಿನೊಂದಿಗೆ ಮಿಶ್ರಣಮಾಡಿ ಸಿಂಪರಣೆ ಮಾಡುವುದರಿಂದ ಕೀಟದ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಎಸ್​.ಸುಪ್ರಿಯಾ ಮಾತನಾಡಿ, ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ಬಾಧೆ ಕಂಡು ಬಂದಿದ್ದು, ಪ್ರಾರಂಭಿಕ ಹಂತದಲ್ಲಿ ಗರಿಗಳು ಹಾಗೂ ಕಾಯಿಗಳ ಮೇಲೆ ಚಿಕ್ಕದಾದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ಕ್ರಮೇಣ ದೊಡ್ಡದಾಗುತ್ತದೆ. ಚುಕ್ಕೆಗಳ ಗಾತ್ರ ಜಾಸ್ತಿಯಾಗಿ ಬಾಧೆಗೊಳಗಾದ ಗರಿಗಳು ಹಳದಿ ಬಣ್ಣಕ್ಕೆ ತಿರುಗುವುದರಿಂದ ಅಡಿಕೆ ಗಿಡಗಳ ಬೆಳವಣಿಗೆ ಹಾಗೂ ಕಾಯಿಗಳ ಇಳುವರಿ ಕುಂಠಿತವಾಗಿರುವುದು ಕಂಡು ಬಂದಿದೆ. ರೋಗದ ನಿರ್ವಹಣೆಗಾಗಿ ಪ್ರೊಪಿಕೊನಜೋಲ್​ ಶೇ.25 ಇಅ ಯನ್ನು 1 ಮಿ.ಲೀ. / ಲೀ. ನೀರಿನೊಂದಿಗೆ ಬೆರೆಸಿ ಸಿಂಪರಣೆ ಮಾಡಬೇಕೆಂದು ರೈತರಿಗೆ ಸಲಹೆ ನೀಡಿದರು. ಪ್ರಾತ್ಯಕೆಯಲ್ಲಿ ರೈತರಿಗೆ ಎಲೆಚುಕ್ಕೆ ಮತ್ತು ಸುಳಿ ತಿಗಣೆ ನಿರ್ವಹಣೆಗಾಗಿ ಅಗತ್ಯ ಪರಿಕರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗೊಲ್ಲಹಳ್ಳಿ ಮತ್ತು ಸುತ್ತಮುತ್ತಲಿನ 30 ರೈತರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net