ಚಿರತೆ ದಾಳಿಗೆ ಫಾರಂನಲ್ಲಿದ್ದ ನಾಟಿ ಕೋಳಿಗಳು ಬಲಿ

23BTP04
ವಡ್ಡರಹೊಸಹಳ್ಳಿ ಗ್ರಾಮದ ಹೊರಹೊಲಯದ ನಾಟಿಕೋಳಿ ಫಾರಂ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ, ಕೋಳಿಗಳ ಮಾರಣಹೋಮವಾಗಿರುವುದು.
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ವಡ್ಡರಹೊಸಹಳ್ಳಿ ಗ್ರಾಮದ ಹೊರಹೊಲಯದ ನಾಟಿಕೋಳಿ ಫಾರಂ ಮೇಲೆ ಸೋಮವಾರ ರಾತ್ರಿ ಚಿರತೆ ದಾಳಿ ಮಾಡಿದ ಪರಿಣಾಮ ಕೋಳಿಗಳ ಮಾರಣಹೋಮವಾಗಿದೆ.

ಗ್ರಾಮದ ಅರಬ್ ಜಾನ್ ಎಂಬುವರ ಜಮೀನಿನ ನಾಟಿ ಕೋಳಿ ಫಾರಂಗೆ ಚಿರತೆ ಹಾಗೂ ಅದರ ಮರಿಗಳು ಸೋಮವಾರ ರಾತ್ರಿ ಬಂದು ಕೋಳಿಗಳ ಮೇಲೆ ಏಕಾಏಕಿ ದಾಳಿ ಮಾಡಿವೆ. ಅಲ್ಲದೆ ಹಲವು ಕೋಳಿಗಳ ಕುತ್ತಿಗೆ ಕಚ್ಚಿ, ಕೊಂದು ಹಾಕಿದ್ದು, ಇನ್ನೂ ಹಲವು ಕೋಳಿಗಳ ಕುತ್ತಿಗೆ ಭಾಗದಲ್ಲಿ ರಕ್ತಹೀರಿ ದಾರಿ ಉದ್ದಕ್ಕೂ ಅಕ್ಕಪಕ್ಕದ ಜಮೀನಿನಲ್ಲಿ ಬಿಸಾಡಿ ಹೋಗಿವೆ.

ಸಾಲ ಮಾಡಿ ಫಾರಂ ನಡೆಸುತ್ತಿದ್ದು, ಚಿರತೆ ದಾಳಿ ಮಾಡಿದ ಪರಿಣಾಮ ತುಂಬ ನಷ್ಟ ಉಂಟಾಗಿದೆ. ಒಂದು ವೇಳೆ ನಾವುಗಳೇ ಚಿರತೆಗೆ ಬಲಿಯಾಗಿದ್ದರೆ ಏನು ಮಾಡಬೇಕಾಗಿತ್ತು? ನಮ್ಮ ಕೋಳಿ ಫಾರಂನಲ್ಲಿ ಸುಮಾರು 580ಕ್ಕೂ ಹೆಚ್ಚು ಕೋಳಿಗಳನ್ನು ಸಾಕಲಾಗಿತ್ತು. ಚಿರತೆ ದಾಳಿಯಿಂದ ಸುಮಾರು 500ಕ್ಕೂ ಹೆಚ್ಚು ಕೋಳಿಗಳು ಬಲಿಯಾಗಿವೆ. ಆಗಿರುವ ನಷ್ಟಕ್ಕೆ ನಮಗೆ ಪರಿಹಾರ ನೀಡಬೇಕು ಎಂದು ನಾಟಿ ಕೋಳಿ ಫಾರಂ ಮಾಲೀಕ ಅರಬ್ ಜಾನ್ ಮನವಿ ಮಾಡಿದ್ದಾರೆ.

ಈ ಭಾಗದಲ್ಲಿ ಹೆಚ್ಚಾಗಿ ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ. ರೈತರು ತಮ್ಮ ಜಮೀನುಗಳಿಗೆ ಹಾಗೂ ನಿವಾಸಿಗಳು ರಸ್ತೆಯಲ್ಲಿ ಓಡಾಡಲು ಭಯಪಡುವಂತಹ ಪರಿಸ್ಥಿತಿ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ಮಾಡದೆ ಚಿರತೆ ಸೆರೆ ಹಿಡಿಯುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಅರಬ್ ಜಾನ್ ಅವರಿಗೆ ಉಂಟಾಗಿರುವ ನಷ್ಟವನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಭರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಚಿಕ್ಕನೇರಳೆ ಪಶು ವೈದ್ಯಾಧಿಕಾರಿ ಡಾ.ಚಾಮರಾಜ್ ಭೇಟಿ ನೀಡಿ ಪರಿಶೀಲನೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net