

ಬೆಳಗಾವಿ: ಗಣೇಶ ಚತುರ್ಥಿಯ ಐದನೇ ದಿನದ ಹಿನ್ನಲೆ ಮನೆ ಮನೆಯಲ್ಲಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆ ಭಾನುವಾರ ನಗರದಲ್ಲಿ ನೆರವೇರಿತು.
ಕಪಿಲೇಶ್ವರ ಹೊಂಡದಲ್ಲಿ ವಿವಿಧ ಬಡಾವಣೆಗಳ ಜನ ಕುಟುಂಬ ಸಮೇತರಾಗಿ ವಾದ್ಯಮೇಳಗಳ ಮೆರವಣಿಗೆ ಮೂಲಕ ಆಗಮಿಸಿ, ಪೂಜೆ ಸಲ್ಲಿಸಿ ಗಣಪತಿ ಬಪ್ಪ ಮೋರಯಾ, ಪುಡಚ್ಯಾ ವರ್ಷಿ ಲೌಕರ್ ಯಾ (ಮುಂದಿನ ವರ್ಷ ಬೇಗ ಬಾ) ಎಂದು ಪ್ರಾರ್ಥನೆಯ ೂಷಣೆ ಹಾಕುತ್ತ ಗಣೇಶ ವಿಸರ್ಜನೆ ಮಾಡಿದರು.
ಸಾವಿರಾರು ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳು ಕಪಿಲೇಶ್ವರ ಹೊಂಡಕ್ಕೆ ಆಗಮಿಸಿದ ಕಾರಣಕ್ಕೆ ಸಂಜೆ 8ರ ನಂತರ ದಟ್ಟಣೆ ಹೆಚ್ಚಾಗಿತ್ತು. ಕಾರುಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಎಸ್ಪಿಎಂ ರಸ್ತೆ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ, ಶನಿ ಮಂದಿರ ಕ್ರಾಸ್ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ಜನರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆಯಿಂದ ಹೊಂಡದ ಸುತ್ತ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಟಿಳಕವಾಡಿ ಭಾಗದ ಜನ ಜಕ್ಕೇರಿ ಹೊಂಡದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿದರು.
ಭಾನುವಾರ ರಜಾ ದಿನವಾಗಿದ್ದರೂ, ಐದನೇ ದಿನ ವಿಸರ್ಜನೆ ಮಾಡಬೇಕಾದ್ದರಿಂದ ಸರ್ಕಾರಿ ಕಚೇರಿಗಳ ಸಿಬ್ಬಂದಿ ಸಂಜೆ ಕಚೇರಿಗೆ ಆಗಮಿಸಿ ತಮ್ಮ ಕಚೇರಿಗಳಲ್ಲಿನ ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ತಂದು ವಿಸರ್ಜಿಸಿದರು. ಸಾರ್ವಜನಿಕರಿಗೆ ಕಪಿಲೇಶ್ವರ ಹೊಂಡಕ್ಕೆ ಆಗಮಿಸುವ ತಾಪತ್ರಯ ಹಾಗೂ ಹೊಂಡದಲ್ಲಿ ಆಗುವ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ನಗರದ ವಿವಿಧೆಡೆಗಳಲ್ಲಿ ಪಾಲಿಕೆಯಿಂದ ಸಂಚಾರಿ ವಿಸರ್ಜನಾ ವಾಹನಗಳ ವ್ಯವಸ್ಥೆ ಸಹ ಮಾಡಲಾಗಿತ್ತು.
ಸಾರ್ವಜನಿ ಗಣೇಶ ವೀಕ್ಷಣೆ ಇಂದಿನಿಂದ:
ಮನೆಗಳಲ್ಲಿ ಐದು ದಿನ ಗಣೇಶ ಇರುವ ಕಾರಣಕ್ಕೆ ಸಾರ್ವಜನಿಕ ಗಣೇಶ ವೀಕ್ಷಣೆಗೆ ಕಳೆದ ಐದು ದಿನಗಳಿಂದ ದಟ್ಟಣೆ ಇರಲಿಲ್ಲ. ಈಗ ಐದನೇ ದಿನಕ್ಕೆ ವಿಘ್ನೇಶ್ವರನಿಗೆ ವಿದಾಯ ಹೇಳಿರುವ ಜನ, ಸೋಮವಾರದಿಂದ ಸಾರ್ವಜನಿಕ ಮಂಟಪಗಳತ್ತ ಬರಲಿದ್ದು, ಇಂದಿನಿಂದ ಸಾರ್ವಜನಿಕ ಗಣೇಶ ವೀಕ್ಷಣೆಯ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.