

ಚಿಕ್ಕಮಗಳೂರು: ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್.ಮಂಜುನಾಥ್ ಅವರು ಕೊಪ್ಪಳ ಜಿಲ್ಲೆಯ ಕುಷ್ಕಗಿ ತಾಲ್ಲೂಕಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾಗಿ ಮುಂಬಡ್ತಿ ಹೊಂದಿದ ಹಿನ್ನೆಲೆ ಮಂಗಳವಾರ ಚಿಕ್ಕಮಗಳೂರು ವಕೀಲರ ಸಂಘದಿAದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ನಾಗರೀಕ ಸೇವೆಯಲ್ಲಿ ವರ್ಗಾವಣೆ ಎಂಬುದು ಅನಿವಾರ್ಯ. ಇರುವಷ್ಟು ದಿವಸಗಳಲ್ಲಿ ಉತ್ತಮ ಸೇವೆ ಹಾಗೂ ವಕೀಲರ ನಡುವಿನ ಪರಸ್ಪರ ವಿಶ್ವಾಸವೇ ಮರೆಯಲಾಗದ ನೆನಪುಗಳು ಎಂದು ತಿಳಿಸಿದರು.
ವಕೀಲರಿಗೆ ಉತ್ತಮ ಕಕ್ಷಿದಾರರಂತೆ, ನ್ಯಾಯಾಧೀಶರು ಸಿಗುವುದು ಅದೃಷ್ಟ. ಹೀಗಾಗಿ ಕಳೆದ ಎರಡೂವರೆ ತಿಂಗಳ ಅಲ್ಪ ಅವಧಿಯಲ್ಲಿ ಆರ್.ಮಂಜುನಾಥ್ ಪರಸ್ಪರ ಭಾಂದವ್ಯ ಹೊಂದಿದ್ದರು. ಸಾಕ್ಷಿಗಳ ರೆಕಾರ್ಡ್ಗಳ ವಿಚಾರದಲ್ಲಿ ತ್ವರಿಗತಿಯಲ್ಲಿ ಕೆಲಸ ನಿರ್ವಹಿಸಿ ಇತ್ಯರ್ಥಗೊಳಿಸುವ ಸಾಮರ್ಥ್ಯ ಹೊಂದಿದ್ದರು ಎಂದರು.
ಜಿಲ್ಲಾ ಸತ್ರ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶೆ ಶುಭಗೌಂಡರ್ ಮಾತನಾಡಿ, ಕೆಲವೇ ದಿನಗಳಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಿ ಬಡ್ತಿ ಹೊಂದಿರುವುದು ಹೆಮ್ಮೆಯ ವಿಷಯ. ಇಲ್ಲಿಂದ ತೆರಳುವ ನ್ಯಾಯಾಧೀಶರು ಅಲ್ಲಿಯೂ ಉತ್ತಮ ಕರ್ತವ್ಯ ನಿರ್ವಹಿಸಿ ಹೆಸರು ಸಂಪಾದಿಸಲಿ ಎಂದು ಶುಭ ಕೋರಿದರು.
ಬೀಳ್ಕೊಡಿಗೆ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶ ಆರ್.ಮಂಜುನಾಥ್, ಮೊದಲಬಾರಿ ಜಿಲ್ಲೆಗೆ ಆಗಮಿಸುವ ಮುನ್ನ ಆತಂಕವಿತ್ತು. ಆದರೆ ಇಲ್ಲಿನ ವಕೀಲರು ಹಾಗೂ ನ್ಯಾಯಾಧೀಶರುಗಳ ಸಹಕಾರ ಆತ್ಮತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಪಕೃತಿಯ ಮಡಿಲು ಚಿಕ್ಕಮಗಳೂರಿಗೆ ಮತ್ತೊಮ್ಮೆ ಆಗಮಿಸಲು ಇಚ್ಚಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್. ಅನಿಲ್‌ಕುಮಾರ್, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎನ್.ಎ.ಪ್ರಿಯದರ್ಶಿನಿ, ಕಾರ್ಯಕಾರಿ ಸಮಿತಿ ಸದಸ್ಯ ಪಿ.ಪರಮೇಶ್, ವಕೀಲರಾದ ಎಸ್.ಎಚ್.ಮಹೇಶ್‌ಕುಮಾರ್, ಡಿ.ಸಿ.ಪುಟ್ಟೇಗೌಡ ಮತ್ತಿತರರಿದ್ದರು.