

ಕೆ.ಎಂ.ದೊಡ್ಡಿ: ಇಲ್ಲಿನ ಭಾರತೀ ಕಾಲೇಜಿನಲ್ಲಿ 37 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್. ರೇವಣ್ಣ ಅವರನ್ನು ಭಾರತೀ ಕಾಲೇಜಿನ ಅಧ್ಯಾಪಕರ ಸಂಘದ ವತಿಯಿಂದ ಅಭಿನಂದಿಸಿ ಬೀಳ್ಕೊಡಲಾಯಿತು.
ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಅಧ್ಯಾಪಕರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾ ಸಂಸ್ಥೆಯ ಚೇರ‌್ಮನ್ ಮಧು ಜಿ. ಮಾದೇಗೌಡ ಅವರು ಪ್ರೊ.ಎಸ್.ರೇವಣ್ಣ ಅವರನ್ನು ಅಭಿನಂದಿಸಿ ಮಾತನಾಡಿ, ಭಾರತೀ ಉತ್ಸವವನ್ನು ಉತ್ತಮವಾಗಿ ಕಾರ್ಯಯೋಜನೆ ರೂಪಿಸಿದ್ದು, ರೇವಣ್ಣವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸ ಪರಿಕಲ್ಪನೆ ವೈಚಾರಿಕ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮತ್ತು ಸಂಸ್ಥೆಯ ವಿದ್ಯಾರ್ಥಿಗಳಿಗೂ ನೀಡಬೇಕು.ಇದಕ್ಕೆ ನಮ್ಮ ಸಹಕಾರ ಇದ್ದು, ಸಂಸ್ಥೆಯ ಬಗ್ಗೆ ಅವರ ಸಹಕಾರ ನಿರಂತರವಾಗಿರಲಿ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ರೇವಣ್ಣ, ಒಳ್ಳೆ ಕಾರ್ಯ ಮಾಡಿದರೆ ಒಳ್ಳೆಯದೇ ಆಗುತ್ತದೆ ಎಂದ ಅವರು, ತನ್ನ ಗುರುಗಳಾದ ಚೆನ್ನಯ್ಯ, ಅಟೆಂಡರ್ ವೈರಮುಡಿ ತಮ್ಮ ಕಾರ್ಯ ಕ್ಷೇತ್ರದಲ್ಲಿ ಇವರ ಪಾತ್ರಗಳನ್ನು ನೆನಪಿಸಿಕೊಂಡರು. ಹಿರಿಯ ಅಧ್ಯಾಪಕರ ಸಹಕರ ಮುಖ್ಯ ಎಂದರು.
ಬಳಿಕ ಪ್ರಾಂಶುಪಾಲ ಡಾ. ಎಂ.ಎಸ್.ಮಹದೇವಸ್ವಾಮಿ ಮಾತನಾಡಿ, ಭಾರತೀ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವೆಂಕಟರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.