ನಿವೃತ್ತರಾದ ಮ.ನಾ.ನಾಗರಾಜ್‌ಗೆ ಬೀಳ್ಕೊಡುಗೆ

22
Published on

ಮೈಸೂರು: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 39 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತರಾದ ಮ.ನಾ.ನಾಗರಾಜ್ ಮತ್ತು ಜಯಶ್ರೀ ದಂಪತಿಯನ್ನು ವಿದ್ಯಾರ್ಥಿಗಳು, ಶಿಕ್ಷಕರು, ಸ್ನೇಹಿತರು ಸೋಮವಾರ ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.

ಮೈಸೂರಿನ ದಕ್ಷಿಣ ವಲಯ ರೈಲ್ವೆ ಕಾರ್ಯಾಗಾರ ಕಾಲನಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾಗರಾಜ್ ಅವರು, 1986ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹಿಪ್ಲ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನ ಪ್ರಾರಂಭಿಸಿದ ನಾನು ಮೈಸೂರು ಜಿಲ್ಲೆಯ ಹಲವು ಶಾಲೆಗಳಲ್ಲಿ ಕೆಲಸ ಮಾಡಿ ಸಿಆರ್‌ಪಿ, ಬಿಆರ್‌ಪಿಯಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದು ಮರೆಯಲಾರೆ ಎಂದರು.

ಮೈಸೂರು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷನಾಗಿ ಎಲ್ಲರ ಸಹಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ ತೃಪ್ತಿ ಇದೆ. ಶಾಲೆಗೆ ಅನೇಕ ದಾನಿಗಳಿಂದ ಬೆಂಚು, ಪ್ರೊಜೆಕ್ಟರ್, ಆಟದ ಸಾಮಗ್ರಿ, ನೋಟ್‌ಪುಸ್ತಕಗಳನ್ನು ಕೊಡಿಸಲು ಸಹಕರಿಸಿದ್ದೇನೆ. ಇದಕ್ಕೆ ಬೆಂಬಲ ನೀಡಿದ ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಮುಖ್ಯಶಿಕ್ಷಕಿ ಎಲ್. ಲತಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸೋಮೇಗೌಡ, ಮೈಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ನಿವೃತ್ತ ಬಿಇಒ ಬಿ.ಇ. ರಮೇಶ್, ಶ್ರೀಕಂಠಶೆಟ್ಟಿ, ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net