

ಮೈಸೂರು: ಸುತ್ತೂರು ಮಠದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತಿ ಮಹೋತ್ಸವದ ಅಂಗವಾಗಿ ಜೆಎಸ್‌ಎಸ್ ಮಹಾವಿದ್ಯಾಪೀಠದ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಭಾನುವಾರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿನಂದಿಸಿ ಆಶೀರ್ವದಿಸಿದರು.
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಕೆ.ಪಿ.ವಿಜಯಕುಮಾರ್ ಅವರು ಮಾತನಾಡಿ, ಬಡತನದಲ್ಲಿ ಬೆಳೆದು ಬಂದ ನಮಗೆ ರಾಜೇಂದ್ರ ಶ್ರೀ ಅನ್ನ, ಆಶ್ರಯ, ಅರಿವು ನೀಡಿದರು. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಾದ ನಮ್ಮಂಥವರಿಗೂ ಇಂಜಿನಿಯರಿಂಗ್ ಶಿಕ್ಷಣಕ್ಕೆ ಅವಕಾಶ ನೀಡಿದರು. ದೇಶಿಕೇಂದ್ರ ಸ್ವಾಮೀಜಿ ಜೀವನ ಸಾಗಿಸಲು ಉದ್ಯೋಗ ನೀಡಿದರು ಎಂದು ಸ್ಮರಿಸಿದರು.
ಜೆಎಸ್‌ಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ನಟರಾಜು ಮಾತನಾಡಿ, ಸೇವೆ ಸಲ್ಲಿಸಿ ನಿವೃತ್ತರಾದರವನ್ನು ಅಭಿನಂದಿಸುವುದು ಒಂದು ಮಾದರಿ ಕಾರ್ಯವಾಗಿದೆ. ಪೂಜ್ಯರ ಮಾತೃ ವಾತ್ಸಲ್ಯ ನಮಗೆಲ್ಲ ಭಾವತುಂಬಿ ಬರುವಂತೆ ಮಾಡಿದೆ. ಕೆಲಸ ಮಾಡಲು ಅತ್ಯುತ್ತಮ ಅವಕಾಶಗಳನ್ನು ಶ್ರೀಗಳು ನೀಡಿದ್ದಾರೆ. ಇದು ನಮಗೆ ಉತ್ತಮ ರೀತಿಯಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಯಿತು. ಜೆಎಸ್‌ಎಸ್ ಸಂಸ್ಥೆಯಲ್ಲಿ ಒಂದು ಕುಟುಂಬದ ಸದಸ್ಯರ ರೀತಿಯಲ್ಲಿ ಎಲ್ಲ ನೌಕರರನನ್ನು ಪರಿಗಣಿಸಲಾಗುತ್ತದೆ. ಮಠದ ಋಣ ತೀರಿಸುವುದು ಅಸಾಧ್ಯ ಎಂದು ಹೇಳಿದರು.
ಮಹಾವಿದ್ಯಾಪೀಠದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ 2023 ಸೆಪ್ಟೆಂಬರ್‌ನಿಂದ 2024 ಆಗಸ್ಟ್ 25ರವರೆಗೆ 177 ನಿವೃತ್ತರಾದವರು, ಸೇವೆಯಿಂದ ಬಿಡುಗಡೆಗೊಂಡವರಿಗೆ ಅಭಿನಂದನೆ ಮತ್ತು ಸೇವೆ ಸಲ್ಲಿಸುತ್ತಿರುವಾಗಲೆ ಅಗಲಿದವರ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು. ನಿವೃತ್ತರ ಪರಿಚಯದ ‘ತೇರನೆಳೆದವರು’ ಪುಸ್ತಕವನ್ನು ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಬಿಡುಗಡೆ ಮಾಡಿದರು.
ಸಂಸ್ಥೆಯ ಪ್ರೊ.ಆರ್.ಮೂಗೇಶಪ್ಪ, ಡಾ.ಬಿ.ಪ್ರಭುಸ್ವಾಮಿ, ಡಾ.ಎಚ್.ಎಸ್.ಅಂಬಿಕಾ, ಆರ್.ಜೆ.ಪ್ರತಿಭಾ, ಡಾ.ಎನ್.ಮಹೇಶ್ವರಿ, ಆರ್.ಎಸ್.ಕುಮಾರ್, ಡಿ.ಎಸ್.ಅಂಬಿಕಾ, ಕೆ.ಜಿ.ವಿನುತಾ, ಡಾ.ಪ್ರಿಯದರ್ಶಿನಿ, ಎಚ್.ಎಸ್.ಮಾನಸಾ ನಿವೃತ್ತರ ಪರಿಚಯ ಮಾಡಿಕೊಟ್ಟರು.