

ಕುಶಾಲನಗರ: ಕುಶಾಲನಗರದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಕೆ.ಆರ್.ರಾಣಿ ಅವರಿಗೆ ಶಾಲೆಯ ವತಿಯಿಂದ ಶನಿವಾರ ಸನ್ಮಾನಿಸಿ ಬೀಳ್ಕೊಡಲಾಯಿತು.
ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪಾ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕಿಯಾಗಿ ನಂತರ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಹೊಂದಿ 39 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳುತ್ತಿರುವ ರಾಣಿ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ವೃಂದ, ಪಾಲಕರು ಹಾಗೂ ಅಧಿಕಾರಿ ವರ್ಗದ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.
ಮುಖ್ಯ ಶಿಕ್ಷಕಿ ಕೆ.ಆರ್.ರಾಣಿ ಮಾತನಾಡಿ, ಅಪಾರ ಜ್ಞಾನ ಮತ್ತು ಅನುಭವ ನೀಡಿರುವ ಶಿಕ್ಷಣ ಇಲಾಖೆಯು ಅಗಾಧವಾದದ್ದು, ಇಲಾಖೆಯಿಂದ ಹೆಚ್ಚು ಕಲಿಯುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಪ್ರಗತಿಗೆ ಶ್ರಮಿಸಿದ್ದೇನೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ವೃತ್ತಿ ಜೀವನ ತೃಪ್ತಿ ತಂದಿದೆ. ಶೈಕ್ಷಣಿಕ ಕ್ಷೇತ್ರದ ಕೇಂದ್ರ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಶಾಲೆಯಲ್ಲಿ ತಮಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ಈ ಶಾಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಕೂಡಿಗೆ ಸಿಆರ್ ಪಿ. ಕೆ.ಶಾಂತಕುಮಾರ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ವಿ.ಸಂತೋಷ್, ಹಿರಿಯ ಶಿಕ್ಷಕಿ ಎಂ.ಎಂ.ಭಾರತಿ ಹಾಗೂ ಇತರ ಶಿಕ್ಷಕಿಯರು ಮಾತನಾಡಿದರು. ಶಿಕ್ಷಕಿಯರಾದ ವಿಜಯಲಕ್ಷ್ಮೀ, ಎಚ್.ಎಂ.ವೀಣಾ, ಬಿ.ಬಿ.ಕುಂಞಮ್ಮ, ವಿ.ಪಿ.ಲತಾ, ಎಚ್.ಎಂ.ನೀಲಮ್ಮ, ಎಂ.ಬಿ.ಜಾನಕಿ, ಕೆ.ಭಾಗ್ಯಮ್ಮ, ಪಿ.ಪಿ.ಭವ್ಯ, ಕೆ.ಎ.ಸಿಂಧೂರಾಣಿ, ಎನ್.ಡಿ.ಸೋಮಶೇಖರ್ ಇತರರು ಇದ್ದರು.