

ಮಡಿಕೇರಿ: ಸಂಸ್ಕಾರವಂತ ಸಮಾಜ ನಿರ್ಮಾಣದ ರುವಾರಿಗಳು ಅಂಗನವಾಡಿ ತಾಯಿಯಂದಿರು ಎಂದು ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಬಣ್ಣಿಸಿದರು.
ಬೋಯಿಕೆರಿ ಅಂಗನವಾಡಿಯಲ್ಲಿ ನಿವೃತ್ತ ಹೊಂದಿದ ಮಕ್ಕಂದೂರು ಅಂಗನವಾಡಿ ಕಾರ್ಯಕರ್ತೆ ಪ್ರೇಮಾವತಿ, ಬೋಯಿಕೇರಿ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಅವರಿಗೆ ಚೇರಂಬಾಣೆ ವೃತ್ತದ ೨೮ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ತಾವು ಪಡೆಯುವ ಗೌರವಧನಕ್ಕೆ ಮೀರಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಇವರಿಂದ ಮಕ್ಕಳು ಸಂಸ್ಕಾರ ಮತ್ತು ಶಿಸ್ತನ್ನು ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳುತ್ತಿದ್ದಾರೆ. ಇಂತಹ ಕಾರ್ಯಕರ್ತೆಯರ ಬೀಳ್ಕೊಡುಗೆ ಸಮಾರಂಭಕ್ಕೆ ಪಾಲ್ಗೊಂಡು ಸನ್ಮಾನಿಸಿದ್ದು ತುಂಬಾ ಸಂತೋಷ ಉಂಟು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಂದ ಛದ್ಮವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರನ್ನು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಅಂಗನವಾಡಿ ಶಿಕ್ಷಕಿ ಎಂದು ಪುನರ್ ಪದನಾಮಿಕರಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಸಂಘದ ಅಧ್ಯಕ್ಷರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ ಹಾಗೂ ಡಾ.ಮಂತರ್ ಗೌಡರವರಿಗೆ ತೆನ್ನಿರ ಮೈನಾ ಅವರ ಮೂಲಕ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆಯ ಅಧ್ಯಕ್ಷೆ ಧರಣಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ಮತ್ತು ಸಿಹಿ ವಿತರಿಸಲಾಯಿತು.