

ನಗರ ಪಾಲಿಕೆಯ ಈ ಬಾರಿಯ ಕೌನ್ಸಿಲ್‌ನ ಅಧಿಕಾರಾವಧಿ ಗುರುವಾರ ಮುಕ್ತಾಯಗೊಳ್ಳಲಿದ್ದು, ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಇದಕ್ಕೂ ಮುನ್ನ ನಗರ ಪಾಲಿಕೆ ಆವರಣದಲ್ಲಿ ಫೋಟೋಸೆಷನ್ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಮಾತನಾಡಿದ ಮೇಯರ್ ಶಿವಕುಮಾರ್, ಐದು ವರ್ಷಗಳ ಅವಧಿಯಲ್ಲಿ ಎಲ್ಲ ಪಕ್ಷದ ಸದಸ್ಯರು ನಗರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಎರಡು ವರ್ಷ ಕೋವಿಡ್ ಬಂದ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ನಗರ ಪಾಲಿಕೆಯ 65 ವಾರ್ಡ್‌ಗಳಿಗೆ 31 ಆಗಸ್ಟ್ 2018 ರಂದು ಚುನಾವಣೆ ನಡೆಯಿತು. ನವೆಂಬರ್ 17 ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಅದೇ ದಿನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಹಾಗಾಗಿ ಈ ಬಾರಿಯ ಕೌನ್ಸಿಲ್‌ನ ಅಧಿಕಾರಾವಧಿ ನ.16ಕ್ಕೆ ಮುಕ್ತಾಯಗೊಳ್ಳಲಿದೆ.
ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲ ಸದಸ್ಯರು ಐದು ವರ್ಷಗಳ ತಮ್ಮ ಅನುಭವವನ್ನು ಹಂಚಿಕೊಂಡರು. ಉಪ ಮೇಯರ್ ಡಾ.ಜಿ. ರೂಪಾ, ಆಯುಕ್ತ ಆಸಾದ್ ಉರ್ ರೆಹ್ಮಾನ್ ಷರೀಫ್ ಹಾಗೂ ಇತರರು ಇದ್ದರು.