

ಮೈಸೂರು: ಮೈಸೂರು ವಕೀಲರ ಸಂಘದಿಂದ ಸಂಘದ ಆವರಣದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಮಾತನಾಡಿ, ನಾನು ಹಿಂದೆ 2005ರಿಂದ ನಾಲ್ಕು ವರ್ಷ ಹಿರಿಯ ಸಿವಿಲ್ ನ್ಯಾಯಾಧೀಶನಾಗಿ ಕೆಲಸ ಮಾಡಿದ್ದೆ. ನಂತರ ಮೈಸೂರಿನಲ್ಲಿ ನನಗೆ 9 ತಿಂಗಳು ಜಿಲ್ಲಾ ಸತ್ರ ನ್ಯಾಯಾಧೀಶನಾಗಿ ಕೆಲಸ ಮಾಡುವ ಅವಕಾಶ ಒದಗಿಬಂತು. ಈ ಅವಧಿಯಲ್ಲಿ ಮೈಸೂರಿನ ವಕೀಲರು, ಕೋರ್ಟ್ ಸಿಬ್ಬಂದಿ ಹಾಗೂ ಜನತೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಇದರಿಂದಾಗಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಸದ್ಯ ವಿಧಾನಸೌಧದಲ್ಲಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಅವಕಾಶ ದೊರೆತಿದೆ. ಭವಿಷ್ಯದಲ್ಲಿ ಹೈಕೋರ್ಟ್‌ನಲ್ಲಿ ಕೆಲಸ ಮಾಡುವ ಅವಕಾಶವಿದ್ದರೂ ಸದ್ಯಕ್ಕೆ ದೊರೆತಿರುವ ಈ ಅವಕಾಶವನ್ನು ಒಪ್ಪಿಕೊಂಡು ಸರ್ಕಾರದ ಕೆಲಸ ಮಾಡಲು ಮುಂದಾಗಿದ್ದೇನೆ. ನನಗೆ ದೊರೆತಿರುವ ಅಧಿಕಾರ ಬಳಕೆ ಮಾಡಿಕೊಂಡು ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸಿಗುವಂತೆ ಮಾಡುತ್ತೇನೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇಸ್ವಾಮಿ ಮಾತನಾಡಿ, ಸಂಗ್ರೇಶಿ ಅವರಂತಹ ಬದ್ಧತೆಯ ನ್ಯಾಯಾಧೀಶರ ಸೇವೆ ಜಿಲ್ಲೆಗೆ ದೊರೆತಿದ್ದು ಸದವಕಾಶವಾಗಿದೆ ಎಂದರು.
ಕಳೆದ 9 ತಿಂಗಳಲ್ಲಿ ಅವರು ಸಂಘದ ಪದಾಧಿಕಾರಿಗಳು ಹಾಗೂ ವಕಿಲರೊಂದಿಗೆ ತೋರಿದ ವರ್ತನೆ ಹಾಗೂ ಸಹಕಾರ ಮಾದರಿಯಾಗಿದೆ. ಯಾವುದೇ ಸಂದರ್ಭದಲ್ಲಿಯೂ ತಾಳ್ಮೆ ಹಾಗೂ ತಮ್ಮ ಅಗಾಧ ಅನುಭವದಿಂದ ಕಾರ್ಯನಿರ್ವಹಿಸುತ್ತಿದ್ದ ರೀತಿ ಎಲ್ಲರಿಗೂ ಪ್ರೋತ್ಸಾಹದಾಯಕವಾಗಿತ್ತು ಎಂದು ಸ್ಮರಿಸಿದರು.
ಜಿಲ್ಲಾ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪುಟ್ಟಸ್ವಾಮಿ, ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ.ಆರ್.ಚಂದ್ರಮೌಳಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಕಾರ್ಯದರ್ಶಿ ಎಸ್.ಉಮೇಶ್ ಮತ್ತಿತರರಿದ್ದರು.