

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ತೇರಿನಮನೆಯ ಹತ್ತಿರ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಶ್ರದ್ಧಾ ಭಕ್ತಿಯಿಂದ, ಕಲಾತಂಡಗಳ ಪ್ರದರ್ಶನಗಳ ಮೂಲಕ ವಿಸರ್ಜಿಸಲಾಯಿತು.
ಮೆರವಣಿಗೆಗೆ ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಚಾಲನೆ ನೀಡಿದರು. ನಂತರ ಸೋಮೇಶ್ವರ ತೇರಿನ ಮನೆಯಿಂದ ಆರಂಭವಾದ ಭವ್ಯ ಮೆರವಣಿಗೆ ಬಳಿಗಾರ ಓಣಿ, ಪೇಟೆ ಹನುಮಂತದೇವರ ದೇವಸ್ಥಾನ, ಪುರಸಭೆ ಮೂಲಕ ಹಾದು ಇಟ್ಟಿಗೆರೆ ಬಳಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೊಂಡದಲ್ಲಿ ಗಣೇಶನ ಮೂರ್ತಿ ವಿಸರ್ಜನೆ ಮಾಡಲಾಯಿತು.
ಹನುಮಂತ ಹಾಗೂ ವಾನರ ವೇಷ ಧರಿಸಿದ್ದ ಕಲಾವಿದರು ರಾಮನಾಮ ಭಜನೆಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮೆರವಣಿಗೆಯ ರಂಗು ಹೆಚ್ಚಿದಂತೆ ಅನೇಕರು ಅವರೊಂದಿಗೆ ನರ್ತಿಸಿದರು. ಸೂರಶೆಟ್ಟಿಕೊಪ್ಪದ ಜಗ್ಗಲಗಿ ಮೇಳದ ಜಗ್ಗಲಗಿ ಸದ್ದಿಗೆ ಯುವ ಪಡೆ ಕುಣಿದು ಸಂಭ್ರಮಿಸಿತು. ಡೊಳ್ಳಿನ ತಂಡ, ವೀರಗಾಸೆ ಕುಣಿತ, ಯಕ್ಷಗಾನ ನೃತ್ಯ ಮೆರವಣಿಗೆಯ ರಂಗು ಹೆಚ್ಚಿಸಿದ್ದವು. ಬೃಹತ್ ಗೊಂಬೆಗಳು ಜನರ ಮನಸೂರೆಗೊಂಡವು.
ಚನ್ನಪ್ಪ ಜಗಲಿ, ಶಿವಯೋಗಿ ಅಂಕಲಕೋಟಿ, ಬಸವೇಶ ಮಹಾಂತಶೆಟ್ಟರ, ವಿ.ಎಲ್. ಪೂಜಾರ, ಮಹಾದೇವಪ್ಪ ಅಣ್ಣಿಗೇರಿ, ನಿಂಗಪ್ಪ ಬನ್ನಿ, ಕುಬೇರಪ್ಪ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ಗುರಣ್ಣ ಪಾಟೀಲ ಕುಲಕರ್ಣಿ, ಅಶೋಕಗೌಡ ಪಾಟೀಲ, ಸುರೇಶ ರಾಚನಾಯಕರ್, ಸಿದ್ದನಗೌಡ ಬಳ್ಳೊಳ್ಳಿ, ಶೇಕಪ್ಪ ಹುರಕಡ್ಲಿ, ವಿರುಪಾಕ್ಷ ಆದಿ, ಸುರೇಶ ಚೌಕನವರ, ಗಂಗಾಧರ ಉಮಚಗಿ, ರಾಮಣ್ಣ ಗೌರಿ, ಸಂತೋಷ ಜಾವೂರ ಇತರರು ಇದ್ದರು.