ಕಲಘಟಗಿಯಲ್ಲಿ ಗಣೇಶೋತ್ಸವಕ್ಕೆ ಸಂಭ್ರಮದ ವಿದಾಯ

Published on

ಕಲಘಟಗಿ: ತಾಲೂಕಿನಾದ್ಯಂತ ಪೂಜಿಸಲ್ಪಟ್ಟ ಸಾರ್ವಜನಿಕ ಗಣೇಶನ ಮೂರ್ತಿಗಳಿಗೆ 11ನೇ ದಿನವಾದ ಗುರುವಾರ ಧಾರ್ವಿುಕ ವಿಧಿವಿಧಾನಗಳ ಮೂಲಕ ಅಂತಿಮ ವಿದಾಯ ಸಲ್ಲಿಸಲಾಯಿತು.

ಪಟ್ಟಣದ ಬೆಂಡಿಗೇರಿ ಓಣಿ, ಅಕ್ಕಿ ಓಣಿ, ಜೋಳದೋಣಿ, ಗೌಳಿ ಗಲ್ಲಿ, ಮಾಚಾಪೂರ ತಾಂಡಾ, ಹುಲಿಕಟ್ಟಿ ತಾಂಡಾ, ಅಂಬೇಡ್ಕರ್ ನಗರ, ಗಾಂಧಿನಗರ, ಭೋವಿ ಓಣಿ ಸೇರಿ ಪಟ್ಟಣದಾದ್ಯಂತ ಸುಮಾರು 50ಕ್ಕೂ ಅಧಿಕ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗಿತ್ತು. 11 ದಿನಗಳವರೆಗೂ ನಿರಂತರ ಪೂಜೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮ ನಡೆಸುವ ಮೂಲಕ ವಿಘ್ನ ವಿನಾಶಕನ ಆರಾಧನೆ ಮಾಡಲಾಗಿತ್ತು. 11 ನೇ ಹಾಗೂ ಅಂತಿಮ ದಿನದಂದು ‘ಗಜಾನನ ಮಹಾರಾಜಕೀ ಜೈ’ ಎಂಬ ಘೊಷ ವಾಕ್ಯದೊಂದಿಗೆ ಮೆರವಣಿಗೆ ನಡೆಸಿ ಅಂತಿಮ ವಿದಾಯ ಸಲ್ಲಿಸಲಾಯಿತು.

ಪಟ್ಟಣದ ಹೊರವಲಯದಲ್ಲಿರುವ ಮಾಚಾಪೂರ ತಾಂಡಾದಲ್ಲಿ ಪ್ರತಿಷ್ಠಾಪನೆಗೊಂಡ ಅಯೋಧ್ಯಾ ಅಧಿಪತಿ ಶ್ರೀರಾಮನ ಅವತಾರ ಗಣಪನಿಗೆ ತಾಂಡಾದ ನಿವಾಸಿಗಳು ಕೊನೆಯ ಪೂಜೆ ಸಲ್ಲಿಸಿದರು. ಲಂಬಾಣಿ ಸಂಸ್ಕೃತಿಯ ಪ್ರತೀಕವಾದ ಉಡುಗೆ- ತೊಡುಗೆಗಳನ್ನು ತೊಟ್ಟು, ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದ ಲಂಬಾಣಿಗರು ಗಣೇಶೋತ್ಸವಕ್ಕೆ ವಿದಾಯ ಸಲ್ಲಿಸಿದರು.

ಬೆಂಡಿಗೇರಿ ಓಣಿಯಲ್ಲಿನ ಮೂಷಕ ವಾಹನ ಗಣಪ ಹಾಗೂ ಗೌಳಿಗಲ್ಲಿಯ ಕಲಘಟಗಿ ಕಾ ಸಾಮ್ರಾಟ ಗಣೇಶನಿಗೆ ವಿನಾಯಕ ಮಂಡಳಿ, ಏಕದಂತ ಯುವಕರ ಸಂಘ ಹಾಗೂ ಪಟ್ಟಣದ ಹಿರಿಯರು, ಮಹಿಳೆಯರು ಗುರುವಾರ ಸಂಜೆ ಅಂತಿಮ ಪೂಜೆ ನೆರವೇರಿಸಿದರು. ಮೆರವಣಿಗೆಯಲ್ಲಿ ಭಗವಾ ಧ್ವಜ ಹಾರಿಸುತ್ತ ಬ್ಯಾಂಡ್, ಡೊಳ್ಳು ಕುಣಿತ, ಕರಡಿ ಮಜಲಿನ ಮೂಲಕ ಆಯಾ ಓಣಿಗಳಲ್ಲಿನ ಯುವಕರು ಪರಸ್ಪರ ಬಣ್ಣ ಎರಚುತ್ತ ಗಣಪನಿಗೆ ಅಂತಿಮ ನಮನ ಸಲ್ಲಿಸಿದರು.

ಒಂದೇ ಸ್ಥಳದಲ್ಲಿ ಸಂಭ್ರಮದ ಮೆರವಣಿಗೆ

ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಗಳನ್ನು ಆಯಾ ಓಣಿಯ ಯುವಕ ಮಂಡಳಿಯವರು ಸೇರಿಕೊಂಡು ಮೆರವಣಿಗೆ ಮೂಲಕ ಪಟ್ಟಣದ ಚೌತಮನೆ ಕಟ್ಟೆಗೆ ತಂದು ಸುಮಾರು 1 ತಾಸಿನವರೆಗೂ ಎದುರು ಬದುರುಗೊಂಡು ಗಣೇಶನ ಮೂರ್ತಿಗಳನ್ನು ನಿಲ್ಲಿಸಿ ನಾ ಮೇಲೂ, ತಾ ಮೇಲೂ ಎಂಬಂತೆ ಅತೀ ಹೆಚ್ಚು ಡಿ.ಜೆ ಸೌಂಡ್ ನೀಡುವ ಮೂಲಕ ಕುಣಿದು ಕುಪ್ಪಳಿಸಿದರು.

ಧಾರ್ವಿುಕ ವಿಧಿಗಳಿಂದ ಅಂತಿಮ ವಿದಾಯ

ಸಾರ್ವಜನಿಕ ಗಣೇಶ ಮೂರ್ತಿಗಳನ್ನು ರುಸ್ತುಂಸಾಬ್ ಕೆರೆಗೆ ಒಯ್ದು, ‘ಗಣಪತಿ ಬಪ್ಪ ಮೋರಯಾ.. ಪುಂಡಿ ಪಲ್ಲೆ ಸೋರಯಾ..’ ಎಂಬ ಘೊಷ ಕೂಗುತ್ತಾ ಗಣೇಶನನ್ನು ವಿಸರ್ಜನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net