

ಗೊಳಸಂಗಿ: ಏಳನೆಯ ದಿನವಾದ ಸೋಮವಾರ ಗ್ರಾಮದಲ್ಲಿ ಬಜರಂಗದಳದ ಹಿಂದು ಮಹಾಗಣಪತಿಯ ಅದ್ದೂರಿ ವಿಸರ್ಜನೆಯೊಂದಿಗೆ ಗಜಾನನೋತ್ಸವಕ್ಕೆ ವಿದಾಯ ಹೇಳಲಾಯಿತು.
ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿಯನ್ನು ಏಳು ದಿನ ವಿಶಿಷ್ಟವಾಗಿ ಪೂಜಿಸಲಾಯಿತು. ಸೋಮವಾರ ರಾತ್ರಿ 8 ರಿಂದ ಅವಿರತವಾಗಿ 4 ಗಂಟೆ ಸಹಸ್ರಾರು ಯುವಭಕ್ತರ ನಡುವೆ ಅದ್ದೂರಿ ಮೆರವಣಿಗೆ ನಡೆಯಿತು.
ಮೆರವಣಿಗೆಯುದ್ದಕ್ಕೂ ಬನಾಯೇಂಗೆ ಮಂದಿರ ಹಾಡು ಯುವಕರ ಮೈ-ಮನ ಪುಳಕಿತಗೊಳಿಸಿತು. ಜತೆಗೆ ಸಿಡಿಮದ್ದುಗಳ ಆರ್ಭಟ, ಕೇಸರಿ ಗುಲಾಲಿನ ಅಭಿಷೇಕ ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು.
ಗ್ರಾಪಂ ಅಧ್ಯಕ್ಷ ಕೇಶವ ಪವಾರ, ಸದಸ್ಯರಾದ ರಾವುತ ಸೀಮಿಕೇರಿ, ವಿನೋದ ಭಜಂತ್ರಿ, ಈರಪ್ಪ ಮಲಗೊಂಡ, ಯುವ ಮುಖಂಡರಾದ ಮುತ್ತು ಪರಮಗೊಂಡ, ರಾಜು ಉಪ್ಪಲದಿನ್ನಿ, ಶಿವಪ್ರಸಾದ ಕಾಳಗಿ, ಅಮರೇಶಗೌಡ ಪಾಟೀಲ, ಹುಸನಪ್ಪ ಚಿಮ್ಮಲಗಿ, ಕುಮಾರ ಅಡಗಿಮನಿ ಇತರರಿದ್ದರು. ಇದಕ್ಕೂ ಮುನ್ನ ಗೊಳಸಂಗಿ ಗ್ರಾಮದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಹಲವಾರು ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ಶನಿವಾರ ವಿಸರ್ಜನೆ ಮಾಡಲಾಯಿತು.